ವಿಜಯಪುರ: ಮಹಿಳೆಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ಸಂಬಂಧಿಕರು ಹತ್ಯೆ ಮಾಡಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಹತ್ತರಕಿಹಾಳ ಗ್ರಾಮದ ಸಂಗಪ್ಪ ಭೀಮಪ್ಪ ಹೂಗಾರ (28) ಎಂದು ಗುರುತಿಸಲಾಗಿದೆ. ಜನವರಿ 19ರಂದು ಸಂಗಪ್ಪ ತನ್ನ ಮನೆಯಲ್ಲಿ ವಿವಾಹಿತ ಮಹಿಳೆ ಜತೆ ಇರುವಾಗ ಸಂಬಂಧಿಕರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಸಂಗಪ್ಪನಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಎಫ್ಐಆರ್ ದಾಖಲಾಗಿದೆ.
ಘಟನೆ ವಿವರ: ಹತ್ಯೆಯಾದ ಸಂಗಪ್ಪ ಈಗಾಗಲೇ ಮದುವೆಯಾಗಿದ್ದನು. ಆದರೂ ಇದೇ ಗ್ರಾಮದ ಮಹಿಳೆ ಜತೆ ವಿವಾಹೇತರ ಸಂಬಂಧ ಹೊಂದಿದ್ದ. ಜ.19ರಂದು ಸಂಗಪ್ಪ ಮಹಿಳೆಯ ಜತೆ ತನ್ನ ಮನೆಯಲ್ಲಿದ್ದಾಗ ಈ ವಿಷಯ ಮಹಿಳೆಯ ಸಂಬಂಧಿಕರಿಗೆ ಗೊತ್ತಾಗಿದ್ದು, ಇಬ್ಬರೂ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಸಂಗಪ್ಪನಿಗೆ ಬಡಿಗೆಯಲ್ಲಿ ಹಲ್ಲೆ ಮಾಡಿದ್ದಾರೆ. ನಂತರ ರಾಜಿ ಸಂಧಾನ ಮಾಡಲು ಬೈಕ್ನಲ್ಲಿ ದೇಗಿನಾಳ ಗ್ರಾಮದ ಹೊಲಕ್ಕೆ ಆತನನ್ನು ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಸಂಗಪ್ಪನಿಗೆ ಕೈ ಕಾಲು ಕಟ್ಟಿ ಹಾಕಿ ಮನಬಂದಂತೆ ಮತ್ತೆ ಥಳಿಸಿದ್ದಾರೆ. ಇದರಿಂದ ಸಂಗಪ್ಪ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದು, ಅದಾಗಲೇ ಸಂಗಪ್ಪ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ವರದಿಯಲ್ಲಿದೆ.
ಘಟನೆ ಸಂಬಂಧ ಮೃತ ಸಂಗಪ್ಪ ಹೂಗಾರ ಪತ್ನಿ ನೀಡಿದ ದೂರಿನಂತೆ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪರಸಪ್ಪ ಕೊಲಕಾರ, ಬಸಪ್ಪ ಕೊಲಕಾರ, ಮಲ್ಲಪ್ಪ ಕೊಲಕಾರ ಹಾಗೂ ಪ್ರಭು ನಾಟೇಕಾರ ಅವರನ್ನು ಬಂಧಿಸಲಾಗಿದೆ. ಇನ್ನು, ಕೃತ್ಯದಲ್ಲಿ ಭಾಗಿಯಾದ ನಾಲ್ವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.