ವಿಜಯಪುರ:ಸಂವಿಧಾನ ವಿರೋಧಿ ಶಕ್ತಿಗಳು ಮನುವಾದ ಚರ್ಚೆ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕೆಂಬ ಸಿಎಂ ಆಫ್ ಕರ್ನಾಟಕ ಟ್ವೀಟರ್ ವಾಲ್‌ಗೆ ಸಂಬಂಧಿಸಿದಂತೆ ತೀವ್ರ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಬಿಜೆಪಿ ಎಂದಾದರೂ ಮನು ವಾದದ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿಕೊಂಡಿದೆಯಾ? ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದೆಯಾ? ಅಷ್ಟಕ್ಕೂ ಸಂವಿಧಾನ ಬದಲು ಮಾಡಿದ್ದು ರಾಜೀವ ಗಾಂಧಿ ಅವಧಿಯಲ್ಲಿಯೇ ಎಂದು ಕಿಡಿ ಕಾರಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಶಂಖನಾದ ಅಭಿಯಾನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಸಿಎಂ ಅಧಿಕೃತ ಜಾಲತಾಣದಲ್ಲಿ ಇಂಥದ್ದೊಂದು ಪೋಸ್ಟ್ ಇದೆ. ಅಂದರೆ ಇದು ಸಿಎಂ ಅವರದ್ದೇ ಹೇಳಿಕೆ. ಹಾಗಾದರೆ ಸಂವಿಧಾನ ಬದಲು ಮಾಡಿದ್ದು ಯಾರು? ರಾಜೀವ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ಸಂವಿಧಾನ ಬದಲು ಮಾಡಬೇಕು ಎನ್ನುತ್ತಿದ್ದರು. ಬಿಜೆಪಿ ಅಂದೂ ಆ ಬಗ್ಗೆ ಮಾತನಾಡಿಲ್ಲ ಎಂದರು.
ಸನಾತನದಿಂದಲೇ ಸಂವಿಧಾನದ ಉಳಿವು:ಸನಾತನ ಧರ್ಮ ನಾಶ ಮಾಡುವುದಾಗಿ ಹೇಳುತ್ತಿರುವವರಿಗೆ ತಕ್ಕ ಪಾಠ ಕಲಿಸಬೇಕು. ಸನಾತನ ಧರ್ಮ ಉಳಿದರೆ ಮಾತ್ರ ದೇಶ, ಸಂವಿಧಾನ ಉಳಿಯಲು ಸಾಧ್ಯ. ಹಿಂದುತ್ವ, ಸನಾತನ ಧರ್ಮದಿಂದ ಸಂವಿಧಾನ ಭದ್ರವಾಗಿದೆ. ಪಾಕಿಸ್ತಾನ ಕೂಡ ಇಂದು ಭಾರತಕ್ಕೆ ಸೇರ್ಪಡೆಯಾಗಲು ಹಾತೊರೆಯುತ್ತಿದೆ. ಈ ಹಿಂದೆ ಡಾ. ಅಂಬೇಡ್ಕರ್ ಸಹ ಪಾಕಿಸ್ತಾನ ಹಿಂದುಗಳಿಗೆ ಸುರಕ್ಷಿತವಲ್ಲ, ಮುಸ್ಲಿಂ ಧರ್ಮದಲ್ಲಿ ಭ್ರಾತೃತ್ವಕ್ಕೆ ಅವಕಾಶ ಇಲ್ಲ. ಹೀಗಾಗಿ ಭಾರತಕ್ಕೆ ಮರಳಬೇಕೆಂದಿದ್ದರು. ಹೀಗಾಗಿ ನಾವು 2024ರ ಬಳಿಕ ಗಣಪತಿಯನ್ನು ಪಾಕಿಸ್ತಾನದಲ್ಲಿಯೇ ಕೂರಿಸುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅವರ ವಿಚಾರಗಳಿಗೆ ಕಾಂಗ್ರೆಸ್ ಬೆಲೆ ಕೊಟ್ಟಿಲ್ಲ. ಸಂವಿಧಾನ ರಚಿಸುವ ಸಂದರ್ಭ ಸಹಕಾರ ಕೊಡಲಿಲ್ಲ. ಅವರು ತೀರಿಕೊಂಡಾಗ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಎಕರೆ ಜಾಗೆ ಸಹ ಕೊಡಲಿಲ್ಲ. ಇಂದಿರಾಗಾಂಧಿ, ನೆಹರು, ರಾಜೀವ್ ಗಾಂಧಿ ಹೀಗೆ ಗಾಂಧಿ ಕುಟುಂಬಕ್ಕೆ ಸಾಕಷ್ಟು ಜಾಗ ಕೊಟ್ಟವರು ಅಂಬೇಡ್ಕರ್‌ಗೆ ಮಾತ್ರ ಕಳೇಬರ ಸಾಗಿಸಲು ಹಣಕಾಸಿನ ಸಹಾಯ ಕೂಡ ಕೊಡಲಿಲ್ಲ. ಕೊನೆಗೆ ಅಂಬೇಡ್ಕರ್ ಅವರು ಕಾರು ಮಾರಿ ವಿಮಾನದ ಖರ್ಚು ಭರಿಸಬೇಕಾಯಿತು. ಮುಂಬೈನ ಬೀಚ್‌ವೊಂದರಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು. ಕೊನೆಗೆ ಅವರಿಗೆ ಭಾರತ ರತ್ನ ಸಹ ಕಾಂಗ್ರೆಸ್‌ನವರು ಕೊಡಲಿಲ್ಲ. ಆದರೆ, ಬಿಜೆಪಿ ಡಾ. ಅಂಬೇಡ್ಕರ್ ಅವರ ಆಶಯಗಳಿಗೆ ಅನುಗುಣವಾಗಿದೆ. ದಲಿತರ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ ಎಂದು ವಿವರಿಸಿದರು.