ವಿಜಯಪುರ: ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ತಮ್ಮನ್ನು ಸ್ಪರ್ಧಿಸಲು ಹೈಕಮಾಂಡ್ ಸೂಚಿಸಿದರೆ ಅವರ ತೀರ್ಮಾನಕ್ಕೆ ಬದ್ಧವಿರುವುದಾಗಿ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯವಾಗಿ ಇರುವುದಾದರೆ ಬಿಜೆಪಿಯಲ್ಲಿ ಮಾತ್ರ. ಇಲ್ಲವಾದರೆ ರಾಜಕೀಯದಿಂದ ದೂರವಿರುವುದಾಗಿ ಹೇಳಿದರು.
ಸಿಂದಗಿ ಕ್ಷೇತ್ರ ನನಗೇನು ಹೊಸದಲ್ಲ, ನನ್ನ ತಾಯಿ ತವರು, ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ್ದೇನೆ. ಇತ್ತೀಚೆಗೆ ಸಿಂದಗಿ ಬಿಜೆಪಿ ಕಾರ್ಯಕರ್ತರು ನನಗೆ ಸನ್ಮಾನಿಸಿದ್ದಾರೆ. ಈ ವೇಳೆ ಸಿಂದಗಿ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಬಂದಿದೆ. ಆದರೆ, ನಮ್ಮದು ರಾಷ್ಟ್ರೀಯ ಪಕ್ಷವಿದೆ. ಅಂಪೈರ್ ಆಗಿ ಪಕ್ಷದ ವರಿಷ್ಠರು ಸೀಟಿ ಹೊಡೆಯುತ್ತಾರೆ, ಆಡುವುದು ಮಾತ್ರ ನನ್ನ ಕೆಲಸ ಎಂದರು.
ಬಬಲೇಶ್ವರ ಕ್ಷೇತ್ರದ ಜನ ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆ. ಮೂರು ಬಾರಿ ಚುನಾವಣೆಯಲ್ಲಿ ಸೋತಿರಬಹುದು. ಅದಕ್ಕೆ ಕಾರಣ ಸಹ ಕ್ಷೇತ್ರದ ಜನತೆಗೆ ಗೊತ್ತಿದೆ ಎನ್ನುವ ಮೂಲಕ ಬಬಲೇಶ್ವರ ಕ್ಷೇತ್ರದ ವಿಜೇತ ಅಭ್ಯರ್ಥಿ ವಿರುದ್ಧ ಪರೋಕ್ಷವಾಗಿ ಬೊಟ್ಟು ಮಾಡಿದರು.
ಕ್ಷೇತ್ರದಲ್ಲಿ ಪಕ್ಷಾಂತರ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಿಂದ ಯಾವೊಬ್ಬ ಕಾರ್ಯಕರ್ತ ಬೇರೆ ಪಕ್ಷಕ್ಕೆ ಹೋಗಿಲ್ಲ. ಹೋಗುವುದೂ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.