ವಿಜಯಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೂರು ಕ್ಷೇತ್ರ ಆಯ್ಕೆ ಮಾಡಿಕೊಂಡು ಅರ್ಜಿ ಹಾಕಿದ್ದೇನೆ, ಅದರಲ್ಲಿ ಯಾವ ಕ್ಷೇತ್ರಕ್ಕೆ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ವರಿಷ್ಠರು ನಿರ್ಧಾರ ಮಾಡಿದರೆ ಆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.
ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಸ್ವಕ್ಷೇತ್ರ ಬಸವನಬಾಗೇವಾಡಿ, ನನ್ನ ಹಳೆಯ ಕ್ಷೇತ್ರ ಬಬಲೇಶ್ವರ ಹಾಗೂ ವಿಜಯಪುರ ನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಚ್ಛೆಯಿಂದ ಅರ್ಜಿ ಸಲ್ಲಿಸಿದ್ದೇನೆ. ಕೆಲವರು ಇದು ಬ್ಲ್ಯಾಕ್ ಮೇಲ್ ತಂತ್ರ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಜೀವನದಲ್ಲಿ ಈ ರೀತಿ ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದು ಹೇಳಿದರು. ಬಬಲೇಶ್ವರ ಮೊದಲು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿತ್ತು. ಮತದಾರರಿಗೆ ಹೇಳದೇ ಕ್ಷೇತ್ರ ಬಿಟ್ಟು ಹೋಗಿದ್ದೇನೆ. ಇದು ನನ್ಮ ತಪ್ಪು ನಿರ್ಧಾರವಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ಎಂ ಬಿ ಪಾಟೀಲ್ಗೂ ಸ್ವಾಗತ :ವರಿಷ್ಠರು ಬಸವನಬಾಗೇವಾಡಿ ಕ್ಷೇತ್ರಕ್ಕೆ ನನಗಿಂತ ಯೋಗ್ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾದರೆ ಅವರನ್ನು ಸಹ ಸ್ವಾಗತಿಸುತ್ತೇನೆ. ಎಂ ಬಿ ಪಾಟೀಲರು ನನ್ನ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸಿಕೊಡುವುದು ನನ್ನ ಜವಾಬ್ದಾರಿಯಾಗಿದೆ ಎಂದರು.
ಇತ್ತೀಚಿಗೆ ಸಿದ್ದರಾಮಯ್ಯ ಆಗಮಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಬಬಲೇಶ್ವರ ಕ್ಷೇತ್ರದ ಕಾರ್ಯಕ್ರಮದಲ್ಲಿ ನಾನು ಗೈರಾಗಿದ್ದು, ಅದಕ್ಕೆ ಕಾರಣವಿದೆ. ಎಲ್ಲ ಕ್ಷೇತ್ರದಲ್ಲಿ ಭಾಗವಹಿಸಿದ್ದೆ, ದೇವರಹಿಪ್ಪರಗಿಯಲ್ಲಿ ಭಾಗವಹಿಸಿದ್ದ ವೇಳೆ ಒಬ್ಬರು ನಿಧನರಾದ ಸುದ್ದಿ ತಿಳಿದು ಸಿದ್ದರಾಮಯ್ಯ ಅವರ ಅನುಮತಿ ಪಡೆದು ಗೈರಾಗಿದ್ದೇನೆ ಹೊರತು ಅನ್ಯಥಾ ಭಾವಿಸಬೇಡಿ ಎಂದು ಹೇಳಿದರು.