ವಿಜಯಪುರ: ಕೊರೊನಾದಿಂದ ಸಾವು ಬದುಕಿನ ಮಧ್ಯೆ ಹೋರಾಡಿ, ಎಲ್ಲರ ಆಶೀರ್ವಾದದಿಂದ ಮರುಜನ್ಮ ಪಡೆದು ವಾಪಸ್ ಬಂದಿದ್ದೇನೆ. ನನ್ನ ಕ್ಷೇತ್ರ ನಾಗಠಾಣದಲ್ಲಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ನನಗೆ ಟಿಕೇಟ್ ನೀಡಲಿ ಅಥವಾ ಬಿಡಲಿ.. ಸ್ಪರ್ಧಿಸುವ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪುತ್ರ ಹಾಗೂ ಬಿಜೆಪಿ ಮುಖಂಡ ಗೋಪಾಲ ಕಾರಜೋಳ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸುಮಾರು ಎರಡು ತಿಂಗಳು ಕೋಮಾಗೆ ಜಾರಿದ್ದೆ. ಆ ಎರಡು ತಿಂಗಳಲ್ಲಿ ಏನಾಯಿತು ಒಂದೂ ನೆನಪಿಲ್ಲ. ಇಷ್ಟು ದೀರ್ಘಕಾಲದವರೆಗೆ ಕೋಮಾದಲ್ಲಿದ್ದರೆ ನೆನಪಿನ ಶಕ್ತಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ನನಗೆ ಹಾಗೆ ಆಗಲಿಲ್ಲ. ಆರೋಗ್ಯವಾಗಿ ನಿಮ್ಮ ಮುಂದೆ ಬಂದಿದ್ದೇನೆ. ನನ್ನ ಕ್ಷೇತ್ರದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.