ವಿಜಯಪುರ:ಗಂಡ, ಹೆಂಡತಿ ಅಂದ್ಮೇಲೆ ಕೋಪ-ಜಗಳ ಸಹಜ. ಕ್ಷುಲ್ಲಕ ಕಾರಣಗಳು ಇಲ್ಲವೇ ಸಂಗಾತಿ ಮೇಲಿನ ಅನುಮಾನಕ್ಕೆ ಜಗಳವಾಡಿ ಪ್ರಕರಣ ಹತ್ಯೆಯಲ್ಲಿ ಕೊನೆಗೊಂಡಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ ಇಲ್ಲೊಬ್ಬ ಪತಿ ತನ್ನ ಪತ್ನಿ ನೋಡಲು ಚೆನ್ನಾಗಿ ಇಲ್ಲವೆಂಬ ಒಂದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದ. ಇದೀಗ ಅಪರಾಧಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ರೂ. ದಂಡ ವಿಧಿಸಿದೆ.
ಘಟನೆಯ ವಿವರ: ವಿಜಯಪುರ ಜಿಲ್ಲೆಯ ಕಾತ್ರಾಳ ಗ್ರಾಮದ ನಿವಾಸಿ ಮಾಳಪ್ಪ ಶಿವಪ್ಪ ಚಿನಗಂಡಿ ಶಿಕ್ಷೆಗೊಳಗಾದ ಅಪರಾಧಿ. ಸಾವಿತ್ರಿ ಚಿನಗಂಡಿ ಹತ್ಯೆಯಾದ ದುರ್ದೈವಿ. ಸಾವಿತ್ರ ಪತಿ ಮಾಳಪ್ಪನ ಮೇಲೆ ಸಂಶಯಗೊಂಡು ಜಗಳವಾಡುತ್ತಿದ್ದರಂತೆ. ಇದರಿಂದ ರೋಸಿ ಹೋಗಿದ್ದ ಅತ, ನೀನು ಸರಿಯಿಲ್ಲ, ಸರಿಯಾಗಿ ಕೆಲಸ ಮಾಡುವುದಿಲ್ಲ, ನೋಡಲು ಚಂದವಿಲ್ಲ ಎಂದೆಲ್ಲ ಆರೋಪ ಹೊರಿಸಿ ಆಕೆಯ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದನಂತೆ.
ಇದನ್ನೂ ಓದಿ:23 ವರ್ಷಗಳ ಹಿಂದೆ ಲವ್ ಮ್ಯಾರೇಜ್; ಮಗಳೆದುರೇ ಮಡದಿಯ ಕೊಂದ ಪತಿ!
ಇದರಿಂದ ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. 2015ರ ಮಾರ್ಚ್ 9ರಂದು ಮಾಳಪ್ಪ ಪತ್ನಿ ಸಾವಿತ್ರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾತ್ರಾಳ ಕೆರೆಯ ಒಡ್ಡಿನ ಮೇಲೆ ಬೈಕ್ ನಿಲ್ಲಿಸಿ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಅಲ್ಲಿಯೇ ಸಂಚರಿಸುತ್ತಿದ್ದ ಸವನಳ್ಳಿಯ ಕಲ್ಲಪ್ಪ ಭಾವಿಕಟ್ಟಿ ಹಾಗೂ ಆತನ ಮಗ ತಡೆಯಲು ಮುಂದಾಗಿದ್ದಾಗ ಆರೋಪಿ ಮಾಳಪ್ಪ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸಾವಿತ್ರಿಯನ್ನು ಕೊಲೆ ಮಾಡಿಯೇ ಬಿಟ್ಟಿದ್ದ. ಹೀಗೆ ಕೊಲೆಗೈದು ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಿದ್ದು ಗಾಯಗೊಂಡು ಪೊಲೀಸರ ಅತಿಥಿಯಾಗಿದ್ದನು.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಪಿಐ ಆರ್.ಎಸ್.ಚೌಧರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ, ಮಾಳಪ್ಪ ಚನಗಂಡಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ಅದರಲ್ಲಿ 75 ಸಾವಿರ ರೂ. ಮೃತಳ ವಾರಸುದಾರರಿಗೆ ಹಾಗೂ 25 ಸಾವಿರ ರೂ. ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು.
ಇದನ್ನೂ ಓದಿ:ಉಡುಪಿ: ಕೊಲೆ ಯತ್ನ ನಡೆಸಿದ್ದಾತನೇ ಆತ್ಮಹತ್ಯೆ ಮಾಡಿಕೊಂಡ