ವಿಜಯಪುರ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಯಿಂದ ಅನ್ನದಾತ ಬೆಳೆದ ವಿವಿಧ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕೃಷಿ ಇಲಾಖೆಗೆ ಅಂದಾಜು ಸಿಗದಷ್ಟು ಬೆಳೆ ನಾಶವಾಗಿದೆ. ಈ ಬಾರಿ ಬೆಳೆದ ಅತಿ ಹೆಚ್ಚು ತೊಗರಿ ಬೆಳೆ ಕೊಚ್ಚಿಕೊಂಡು ಹೋಗಿದೆ. ಅಂದಾಜು ನಾಲ್ಕು ದಿನಗಳ ಮಳೆಯಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಸಂಪೂರ್ಣ ನಾಶವಾಗಿದೆ. ಇದರ ಬೆಲೆ ಸುಮಾರು 700 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ನಾಳೆ ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ನಡೆಸಲಿರುವ ವಿಡಿಯೋ ಸಂವಾದದಲ್ಲಿ ಬೆಳೆ ನಷ್ಟದ ಮಾಹಿತಿಯನ್ನು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸಲ್ಲಿಸಲಿದ್ದಾರೆ.
ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಡೋಣಿ ನದಿ ತುಂಬಿ ಹರಿಯುತ್ತಿದ್ದು, ಜನ ಜಾನುವಾರು, ಆಸ್ತಿ ಪಾಸ್ತಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಅದರ ಜೊತೆ ಜಿಲ್ಲೆಯಲ್ಲಿ 4.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಅದರಲ್ಲಿಯೂ ತೊಗರಿ ಬೆಳೆಯನ್ನು ಜಿಲ್ಲೆಯ ರೈತ ಅತಿಯಾಗಿ ಈ ವರ್ಷ ಬೆಳೆದಿದ್ದನು. 3.64 ಲಕ್ಷ ಹೆಕ್ಟರ್ ಪ್ರದೇಶದ ಬೆಳೆಯಲಾಗಿತ್ತು.
ಇದರ ಜೊತೆ ಸೂರ್ಯಕಾಂತಿ, ಹೆಸರು, ಸಜ್ಜೆ, ಮೆಕ್ಕಜೋಳ, ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗಿತ್ತು. ಕಳೆದ 15 ದಿನಗಳ ಹಿಂದೆ ಸುರಿದಿದ್ದ ಮಳೆಯಿಂದ ಅಂದಾಜು 13 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿತ್ತು. 52 ಕೋಟಿ ರೂ. ಅಂದಾಜಿಸಿ ಕೃಷಿ ಇಲಾಖೆ ಜಿಲ್ಲಾಧಿಕಾರಿಗಳಿಗೆ ವರದಿ ಒಪ್ಪಿಸಿತ್ತು. ಆದರೆ ಜಿಲ್ಲೆಯಲ್ಲಿ ಮತ್ತೊಮ್ಮೆ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಕೇವಲ ನಾಲ್ಕು ದಿನಗಳಲ್ಲಿಯೇ 2 ಲಕ್ಷ ಹೆಕ್ಟೇರ್ ( 5ಲಕ್ಷ ಎಕರೆ) ಪ್ರದೇಶದ ಕೃಷಿ ಬೆಳೆ ಸಂಪೂರ್ಣ ನಾಶವಾಗಿದೆ. ಇದರ ಅಂದಾಜು 700 ಕೋಟಿ ರೂ. ಗಳಷ್ಟು ಅಂದಾಜಿಸಲಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ಈ ಅಂದಾಜು ವರದಿಯನ್ನು ಸಿದ್ದಪಡಿಸಿದ್ದು, ನಾಳೆ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗಮನಕ್ಕೆ ತರಲಿದ್ದಾರೆ.