ವಿಜಯಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 54.2 ಮಿಲಿ ಮೀಟರ್ ದಾಖಲೆಯ ಮಳೆಯಾಗಿದೆ. ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಯಿತು.
ಸದ್ಯ ಹವಾಮಾನ ಇಲಾಖೆ ವರದಿಯಂತೆ ನಗರದಲ್ಲಿ ಅತಿ ಹೆಚ್ಚು 54.2ಮಿ.ಮೀಟರ್ನಷ್ಟು ಮಳೆಯಾಗಿದೆ ಹಾಗೂ ಚಡಚಣದಲ್ಲಿ ಮಳೆಯಾಗಿಲ್ಲ. ಉಳಿದಂತೆ ಸಿಂದಗಿ ತಾಲೂಕಿನಲ್ಲಿ 4.35 ಮಿ.ಮೀ, ದೇವರಹಿಪ್ಪರಗಿ ತಾಲೂಕಿನಲ್ಲಿ 25.03ಮೀ.ಮೀ, ಇಂಡಿ ತಾಲೂಕು 5.52ಮಿ.ಮೀ, ತಾಳಿಕೋಟೆ 22.2, ಮುದ್ದೇಬಿಹಾಳ 5.75, ಕೊಲ್ಹಾರ 5.2, ನಿಡಗುಂದಿ 11.8, ಬಾಗೇವಾಡಿ 26.6, ತಿಕೋಟಾ 17.7, ಬಬಲೇಶ್ವರ 8.2, ವಿಜಯಪುರ ತಾಲೂಕು 20.14 ಮೀ.ಮೀಟರ್ ಮಳೆಯಾಗಿದೆ. ಒಟ್ಟು ಜಿಲ್ಲೆಯಲ್ಲಿ ಕಳೆದ 24ಗಂಟೆಯಲ್ಲಿ ಸರಾಸರಿ 12.70ಮಿ.ಮೀ ಮಳೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ವಿಜಯಪುರದಲ್ಲಿ ಭಾರಿ ಮಳೆ.. ಭೀಮಾನದಿಗೆ ಹೆಚ್ಚುವರಿ ನೀರು.. ಸೇತುವೆ ಮುಳುಗಡೆ ಭೀಮಾನದಿಗೆ ಹೆಚ್ಚುವರಿ ನೀರು: ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೀಮಾನದಿಗೆ ಹೆಚ್ಚುವರಿ ನೀರು ಹರಿದು ಬಂದಿದೆ. ಇದರಿಂದಾಗಿ ಆಲಮೇಲ ತಾಲೂಕಿನ ಬಗಲೂರ ಗ್ರಾಮದ ಸೇತುವೆ ಮೇಲೆ ನೀರು ಉಕ್ಕಿದ್ದು, ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ನದಿ ದಂಡೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
30 ಮನೆಗಳಿಗೆ ನುಗ್ಗಿದ ನೀರು: ಕಳೆದ 24ಗಂಟೆಗಳಲ್ಲಿ ಸುರಿದ ಭಾರಿ ಮಳೆಗೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಆಹಾರಧಾನ್ಯ, ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾಗಿದೆ. ಮುಂದಿನ 4 ದಿನಗಳ ಕಾಲ ವಿಜಯಪುರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದೆ.
ಇದನ್ನೂ ಓದಿ :ತುಮಕೂರಿನಲ್ಲಿ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್