ವಿಜಯಪುರ:ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಮತ್ತಷ್ಟು ಚುರುಕುಗೊಂಡಿದೆ.
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ..ಕೃಷಿ ಚಟುವಟಿಕೆ ಚುರುಕು ಈಗಾಗಲೇ ಶೇ.70 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿಯವರೆಗೆ ಶೇ. 50ರಷ್ಟು ಪ್ರಮಾಣದಲ್ಲಿ ಮಾತ್ರ ಮಳೆಯಾಗಿದ್ದು, ಅನ್ನದಾತರಲ್ಲಿ ಆತಂಕ ಮೂಡಿದೆ. ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದ ಕಾರಣ ಆಲಮಟ್ಟಿ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಈ ಮೂಲಕ ಬಿತ್ತನೆ ಬೆಳೆ ಉಳಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಎರಡು ದಿನದಲ್ಲಿ ಜಿಲ್ಲೆಯಲ್ಲಿ 42.2 ಮಿಮೀ ಮಳೆ ಆಗಿದ್ದು, ಬಸವನ ಬಾಗೇವಾಡಿ ತಾಲೂಕಿನಲ್ಲಿ ಅತಿ ಹೆಚ್ಚು 49.00 ಮಿಮೀ ಮಳೆಯಾಗಿದೆ. ವಾಸ್ತವವಾಗಿ ಇಲ್ಲಿಯವರೆಗೆ 657 ಮಿಮೀ ಮಳೆಯಾಗಬೇಕಿತ್ತು. ಆದರೆ, ಸದ್ಯ 303 ಮಿ.ಮೀ ಮಾತ್ರ ಮಳೆಯಾಗಿದೆ. ಶೇ. 50ರಷ್ಟು ಮಳೆ ಕೊರತೆಯಾಗಿದೆ. ರೈತರು ಈಗಾಗಲೇ 3.40 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಶೇ. 70ರಷ್ಟು ಬಿತ್ತನೆ ಮಾಡಿದ್ದಾರೆ. ಸದ್ಯ, ಬಿತ್ತನೆಗೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗದಿದ್ದರೂ ಮುಂದೆ ಮಳೆ ಕಡಿಮೆಯಾದರೆ ರೈತ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಬಹುದು. ಇದಕ್ಕಾಗಿ ಡಿಸಿಎಂ ಕಾರಜೋಳ ಸೂಚನೆಯಂತೆ ಆಲಮಟ್ಟಿ ಜಲಾಶಯದಿಂದ ಕಾಲುವೆ, ಕೆರೆ-ಕಟ್ಟೆಗಳಿಗೆ ನೀರು ಹರಿಸಲು ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿ ನಿರ್ಧರಿಸಿದೆ.
ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದು, 12 ಜಾನುವಾರು ಜೀವ ಕಳೆದುಕೊಂಡಿವೆ. ಡೋಣಿ ನದಿ ಸೇರಿ ಕೆಲವು ಕಡೆಗಳಲ್ಲಿ ಬೆಳೆ ಹಾನಿಯಾಗಿದೆ. ಈಗ ಒಣ ಬೇಸಾಯ ಹಾಗೂ ತೋಟಗಾರಿಕೆ ಬೆಳೆಗಳ ನಷ್ಟ ಕುರಿತು ಆಯಾ ತಾಲೂಕು ತಹಶೀಲ್ದಾರ್ಗಳಿಗೆ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಜಿಲ್ಲೆಯ ಜೀವನಾಡಿ ಆಲಮಟ್ಟಿ ಜಲಾಶಯದಲ್ಲಿ ಒಳಹರಿವು ಕಡಿಮೆಯಾಗುತ್ತಿದೆ. ನೀರಿನ ಸಂಗ್ರಹ ಸಹ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ 123.081 ಟಿಎಂಸಿ ಇದ್ದು, ಸದ್ಯ 89.013 ಟಿಎಂಸಿ ಮಾತ್ರ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 99.905 ಟಿಎಂಸಿ ನೀರು ಸಂಗ್ರಹವಿತ್ತು. ಸದ್ಯ, ನಾರಾಯಣಪುರ ಜಲಾಶಯದಲ್ಲಿ 33 ಟಿಎಂಸಿ ಸಂಗ್ರಹದ ಸಾಮರ್ಥ್ಯದಲ್ಲಿ 30 ಟಿಎಂಸಿ ನೀರು ಸಂಗ್ರಹವಿದ್ದು, ಪ್ರವಾಹದ ಭೀತಿ ತಪ್ಪಿದೆ.