ವಿಜಯಪುರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡರು ಅವರನ್ನು ಬಂಧನಕ್ಕೆ ಒಳಪಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಅವರನ್ನು ಬಂಧಿಸಿ ಏನು ಮಾಡುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು. ಆಲಮಟ್ಟಿಯ ಕೃಷ್ಣಾ ನದಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ನೀರು ಸಂಗ್ರಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಧರ್ಮ-ಧರ್ಮಗಳ ಯುದ್ಧ ನಡೆಯುತ್ತಿದ್ದಾಗ ಕಾಂಗ್ರೆಸ್ ಮುಖಂಡರು ಏನು ಮಾಡುತ್ತಿದ್ದರು? ಮನೆಯಲ್ಲಿ ಕುಳಿತಿದ್ದರು. ಈಗ ಈಶ್ವರಪ್ಪ ಅವರ ಪರ್ಸೆಂಟೇಜ್ ವಿಚಾರವಾಗಿವ ಕಾಂಗ್ರೆಸ್ ಮುಖಂಡರು ಬೀದಿಗೆ ಇಳಿದಿದ್ದಾರೆ. ಅಂದು ಏಕೆ ಬೀದಿಗೆ ಇಳಿಯಲಿಲ್ಲ ಎಂದು ಪ್ರಶ್ನಿಸಿದ ಹೆಚ್‌ಡಿಕೆ, ಅವರು ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಈಶ್ವರಪ್ಪ ಮೇಲೆ ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಬೆಳಗಾವಿಯ ನಿಷ್ಠಾವಂತ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಾಗ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರಾ? ಗೃಹ ಸಚಿವರ ಬಂಧನ ಮಾಡಿದ್ರಾ? ಎಂದು ಪ್ರಶ್ನಿಸಿದರು.
ಅಂದು ಸರ್ಕಾರದ ನಡುವಳಿಕೆಗೆ ಬೇಸತ್ತು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದರು. ಇನ್ನೂ ಕಾಂಗ್ರೆಸ್ ಮುಖಂಡರಿಗೆ ಮುಂದಿನ ಚುನಾವಣೆಯ ಸಲುವಾಗಿ ಮಾತನಾಡಲು ವಿಷಯವೇ ಇಲ್ಲ. ಹೀಗಾಗಿ, ಆತ್ಮಹತ್ಯೆ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದರು.