ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಕೆಲ ಯುವಕರ ಮಧ್ಯೆ ಜಗಳ ನಡೆದು ಮನೆ ಬಾಗಿಲಲ್ಲೇ ರಾಜಾರೋಷವಾಗಿ ಲಾಂಗು, ಮಚ್ಚು ಪ್ರದರ್ಶಿಸಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಸವನಬಾಗೇವಾಡಿ ತಾಲೂಕಿನ ನರಸಲಗಿ ತಾಂಡಾದಲ್ಲಿ ಮೂರು ದಿನಗಳ ಹಿಂದೆ ಬಾಲಕನೊಬ್ಬನಿಗೆ ಬೈಕ್ ಡಿಕ್ಕಿಯಾಗಿದ್ದಕ್ಕೆ ಆಕ್ರೋಶಗೊಂಡ ಕೆಲ ಯುವಕರು ಅಪಘಾತ ಮಾಡಿದ್ದ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಧಮ್ಕಿ ಹಾಕಿದ್ದಾರೆ. ಲಾಂಗು, ಮಚ್ಚು ತೋರಿಸಿ ಹೆದರಿಸಿದ್ದಾರೆ. ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ಈ ದೃಶ್ಯಾವಳಿಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಈಗ ವೈರಲ್ ಆದ ಬಳಿಕ ಪ್ರಕರಣ ಬಹಿರಂಗವಾಗಿದೆ.
ಲಾಂಗು, ಮಚ್ಚು ತೋರಿಸಿ ಬೆದರಿಸುತ್ತಿರುವ ಯುವಕರು ನರಸಲಗಿ ತಾಂಡಾದಲ್ಲಿ ಮೂರು ದಿನಗಳ ಹಿಂದೆ ಬಾಲಕನೋರ್ವನಿಗೆ ಸತೀಶ್ ರಾಠೋಡ್ ಎಂಬಾತ ಆಕಸ್ಮಿಕವಾಗಿ ಬೈಕ್ ಡಿಕ್ಕಿ ಹೊಡೆಸಿದ್ದ. ಇದರಿಂದ ಆಕ್ರೋಶಗೊಂಡ ಬಾಲಕನ ಕಡೆಯ ಯುವಕರು, ಸತೀಶ್ ರಾಠೋಡ್ ಹಾಗೂ ಆತನ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಲಾಂಗು, ಮಚ್ಚು ಸಮೇತ ಮನೆಗೆ ಆಗಮಿಸಿ ಹಲ್ಲೆಗೆ ಯತ್ನಿಸಿದ ಶ್ರೀಶೈಲ ರಾಠೋಡ್, ಸಂತೋಷ ರಾಠೋಡ್, ನಾಗೇಶ ರಾಠೋಡ್, ಕುಮಾರ ರಾಠೋಡ್ ಎಂಬುವವರು ಈ ವಿಡಿಯೋದಲ್ಲಿ ಸೆರೆಯಾಗಿದ್ದಾರೆ.
ಈ ಪ್ರಕರಣದ ಬಗ್ಗೆ ಬಸವನಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿರುವ ಸತೀಶ್ ಕುಟುಂಬ, ತನಿಖೆ ನಡೆಸಿ ಹಲ್ಲೆಕೋರರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.