ವಿಜಯಪುರ:ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್(kannada sahitya parishat) ನೂತನ ಅಧ್ಯಕ್ಷರಾಗಿ ಸಮಾಜ ಸೇವಕ ಹಾಸಿಂಪೀರ ವಾಲಿಕಾರ ಆಯ್ಕೆಯಾಗಿದ್ದಾರೆ.
ನಿನ್ನೆ(ಭಾನುವಾರ) ನಗರದ ಹಳೆಯ ತಹಶೀಲ್ದಾರ್ ಕಚೇರಿಯಲ್ಲಿ ಸಂಜೆ 4 ಗಂಟೆಯವರೆಗೆ ಮತದಾನ ನಡೆದಿತ್ತು. ಬಳಿಕ ಮತ ಎಣಿಕೆ ನಡೆಸಿದ ಚುನಾವಣಾಧಿಕಾರಿಗಳು ಹಾಸಿಂಪೀರ ವಾಲಿಕಾರ(hashimpura walikara) ಅವರು ಗೆಲುವು ಖಚಿತ ಪಡಿಸಿದರು.
ನಿಕಟ ಪೂರ್ವ ಜಿಲ್ಲಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಯಂಡಿಗೇರಿ ಅವರಿಗಿಂತ ಸುಮಾರು 600 ಮತಗಳ ಅಂತರದಿಂದ ವಾಲಿಕಾರ ಜಯಗಳಿಸಿದ್ದಾರೆ. ಜಿಲ್ಲಾ ಕಸಾಪದಲ್ಲಿ ಒಟ್ಟು 9,745 ಸದಸ್ಯರಿದ್ದು, ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿತ್ತು. 10 ಗಂಟೆ ವೇಳೆಗೆ 1,070 ಸದಸ್ಯರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದರು. ಈ ಮೂಲಕ ಶೇ.10.98 ಮತದಾನ ನಡೆದಿತ್ತು.
ಮಧ್ಯಾಹ್ನ 12 ಗಂಟೆ ವೇಳೆಗೆ ಒಟ್ಟು2,666 ಸದಸ್ಯರು ಮತದಾನ ಮಾಡಿದ್ದು, ಶೇ. 27.36ರಷ್ಟು, ಮಧ್ಯಾಹ್ನ 2 ಗಂಟೆ ವೇಳೆಗೆ ಒಟ್ಟು 4,360 ಸದಸ್ಯರಿಂದ ಶೇ. 44.47ರಷ್ಟು, ಮಧ್ಯಾಹ್ನ 4 ಗಂಟೆಗೆ ಮತದಾನ ಮುಕ್ತಾಯವಾದ ವೇಳೆ 5,620 ಸದಸ್ಯರು ಮತ ಚಲಾಯಿಸುವ ಮೂಲಕ ಶೇ. 57.67ರಷ್ಟು ಮತದಾನವಾಗಿತ್ತು.
ವಾಸಿಂಪೀರ ವಾಲಿಕಾರ ಅವರಿಗೆ 2485 ಮತಗಳು, ಇವರ ಸಮೀಪದ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಯಂಡಿಗೇರಿ 1876 ಮತಗಳು ಹಾಗೂ ಇನ್ನೊಬ್ಬ ಸ್ಪರ್ಧಿ ವಕೀಲ ಮಲ್ಲಿಕಾರ್ಜುನ ಭ್ರಂಗಿಮಠ ಅವರಿಗೆ 1,131 ಮತಗಳು ಲಭಿಸಿದವು. ಈ ಮೂಲಕ ವಾಸಿಂಪೀರ ವಾಲಿಕಾರ ಹೆಚ್ಚು ಮತ ಪಡೆದು ಕಸಾಪ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.