ವಿಜಯಪುರ: ನಗರದ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ರೋಗಿ ಸಂಬಂಧಿಕರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಫೇಸ್ಬುಕ್ನಲ್ಲಿ ಲೈವ್ ಮಾಡಿ ವೈದ್ಯನೋರ್ವ ತನ್ನ ದಯನೀಯ ಸ್ಥಿತಿ ಹೇಳಿಕೊಂಡಿದ್ದಾರೆ.
ವಿಜಯಪುರದ ವೈದ್ಯ ಡಾ. ತಮ್ಮಣ್ಣರಾವ್ ಪಾಟೀಲ್, ಕರ್ನಾಟಕ ಮೆಡಿಕಲ್ ಅಸೋಸಿಯೇಷನ್ ಫೇಸ್ಬುಕ್ ಪೇಜ್‌ಗೆ ಲೈವ್ ಮಾಡಿದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಕೊರೊನಾ ರೋಗಿಯ ಸಂಬಂಧಿಕರು ವೈದ್ಯರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಕೊರೊನಾ ರೋಗಿ ದಾಖಲಿರುವ ಆಸ್ಪತ್ರೆಯ ಐಸಿಯುಗೆ ನುಗ್ಗುವ ರೋಗಿ ಸಂಬಂಧಿಕರು, ತಮ್ಮ ವಿರುದ್ಧ ಅನಾವಶ್ಯಕವಾಗಿ ಆರೋಪ ಮಾಡುತ್ತಾರೆ ಎಂದು ವೈದ್ಯ ಅಳಲು ತೋಡಿಕೊಂಡಿದ್ದಾರೆ.
ಕೋವಿಡ್ ಆಸ್ಪತ್ರೆಗಳಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲದಿದ್ರೂ, ಐಸಿಯುಗೆ ಸಂಬಂಧಿಕರು ನುಗ್ಗುತ್ತಾರೆ. ರೋಗಿಗೆ ಚಿಕಿತ್ಸೆ ನೀಡಿಲ್ಲವೆಂದು ಆರೋಪಿಸಿ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ನಾನು ಸರಿಯಾದ ಸಮಯಕ್ಕೆ ಅಗತ್ಯ ಚಿಕಿತ್ಸೆ ನೀಡಿದ್ದೇನೆ, ರಾತ್ರಿ ನಿದ್ದೆಗೆಟ್ಟು ರೋಗಿಗೆ ಚಿಕಿತ್ಸೆ ನೀಡಿದ್ದೇನೆ. ಎರಡು ತಿಂಗಳಿನಿಂದ ಮನೆಗೆ ಹೋಗಿಲ್ಲ, ಕಾರ್ನಲ್ಲಿ ಕುಳಿತು ಊಟ ಮಾಡ್ತಿದ್ದೇನೆ. ನಮ್ಮ ಸಂಕಷ್ಟ ರೋಗಿ ಕಡೆಯವರಿಗೆ ಅರ್ಥವಾಗ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ರೀತಿ ಗಲಾಟೆ ಮಾಡಿದವರ ವಿರುದ್ಧ ವಿಜಯಪುರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ಆರೋಗ್ಯ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.