ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಾ ರಾ ಮಹೇಶ್ ಜೊತೆ ಮಾತುಕತೆ ನಡೆಸಿದ್ದು, ನಾಳೆ ಅವರು ತಮ್ಮ ರಾಜೀನಾಮೆ ಪತ್ರವನ್ನು ವಾಪಸ್ ಪಡೆಯಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾ ರಾ ಮಹೇಶ್ ರಾಜೀನಾಮೆ ವಿಷಯ ಗೊತ್ತಿದೆ. ವಿಶ್ವನಾಥ್ ಮತ್ತು ಸಾ ರಾ ಮಹೇಶ್ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದರು. ಕೆಟ್ಟ ರಾಜಕಾರಣಕ್ಕೆ ಭಾಗಿಯಾಗಲಾರೆ. ಹಾಗಾಗಿ ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸ್ಪೀಕರ್‌ಗೆ ಪತ್ರ ನೀಡಿರುವುದು ಸತ್ಯ. ಆದರೆ, ಸ್ಪೀಕರ್ ಅಂಗೀಕಾರ ಮಾಡಿಲ್ಲ ಎಂದರು.
ಬದಲಾಗಿ ಅವರ ಮನವೊಲಿಸಿದ್ದಾರೆ. ಸ್ಪೀಕರ್ ಮಾತಿಗೆ ಗೌರವ ನೀಡಿ ರಾಜೀನಾಮೆ ವಾಪಸ್ ಪಡೆಯುವುದಾಗಿ ಸಾ ರಾ ಮಹೇಶ್ ಹೇಳಿಕೆ ನೀಡಿದ್ದಾರೆ. ನಾನೂ ಕೂಡ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಆವೇಶದಿಂದ ಮಾತನಾಡಿದ್ದಾರೆ ಅಷ್ಟೇ.. ನಾಳೆ ಬಂದು ರಾಜೀನಾಮೆ ವಾಪಸ್ ತೆಗೆದುಕೊಳ್ಳಲಿದ್ದಾರೆ ಎಂದರು.
ಎಲೆಕ್ಷನ್, ಬೈ ಎಲೆಕ್ಷನ್‌ನಲ್ಲಿ ಇಲ್ಲ ಮೈತ್ರಿ:
ಪದವೀಧರ ನಾಲ್ಕು ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು, ನಾಲ್ಕೂ ಕ್ಷೇತ್ರದಲ್ಲಿನ ಜೆಡಿಎಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸಲಿದೆ. ಈ ಸಂಬಂಧ ಅಭ್ಯರ್ಥಿ ಆಯ್ಕೆ ಮಾಡಲು ಅಕ್ಟೋಬರ್ 18 ರಂದು ಪಕ್ಷದ ಕಚೇರಿಯಿಂದ ಸಭೆ ಕರೆಯಲಾಗಿದೆ. ವಿಧಾನಸಭೆ, ಪರಿಷತ್‌ನ ಗೆದ್ದ ಮತ್ತು ಸೋತ ಅಭ್ಯರ್ಥಿಗಳನ್ನು ಸಭೆಗೆ ಆಹ್ವಾನಿಸಿದ್ದೇನೆ. ಒಂದೇ ದಿನ ಸಮಯಾವಕಾಶ ಇರುವ ಕಾರಣ ಇಂದು ಸ್ಪೀಡ್ ಪೋಸ್ಟ್ ಮೂಲಕ ಪತ್ರ ಕಳಿಸಿದ್ದೇನೆ. ಅಂದಿನ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಎಲ್ಲರ ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.