ಕರ್ನಾಟಕ

karnataka

ETV Bharat / state

ಸಿದ್ದೇಶ್ವರ ಶ್ರೀ ಲಿಂಗೈಕ್ಯರಾಗಿ ಒಂದು ವರ್ಷ; ಆಶ್ರಮದಲ್ಲಿ ಗುರುನಮನ ಕಾರ್ಯಕ್ರಮ - ಜ್ಞಾನಯೋಗಾಶ್ರಮ

ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿ ಒಂದು ವರ್ಷ ಕಳೆದಿದ್ದು, ಎರಡು ದಿನಗಳ ಕಾಲ ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿ ಇಂದಿಗೆ ಒಂದು ವರ್ಷ
ಶ್ರೀಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿ ಇಂದಿಗೆ ಒಂದು ವರ್ಷ

By ETV Bharat Karnataka Team

Published : Jan 2, 2024, 7:07 AM IST

ವಿಜಯಪುರ:ನಡೆದಾಡುವ ದೇವರು, ಶತಮಾನದ ಸಂತ ಎಂದೇ ಖ್ಯಾತಿ ಪಡೆದಿದ್ದ ಇಲ್ಲಿನ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿ ಒಂದು ವರ್ಷವಾಗುತ್ತಿದೆ. ನಗರದ ಜ್ಞಾನ ಯೋಗಾಶ್ರಮದ ಆವರಣದಲ್ಲಿ ಎರಡು ದಿನಗಳ ಕಾಲ ಗುರು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೋಮವಾರ ದೀಪ ನಮನದ ಮೂಲಕ ಶ್ರೀಗಳಿಗೆ ಗೌರವಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಲವು ಮಠಾಧೀಶರು, ಸಂಸದ ರಮೇಶ ಜಿಗಜಿಣಗಿ, ಮೈಸೂರಿನ ಸಾಹಿತಿ ಕೆ.ಸಿ.ಶಿವಪ್ಪ ಸೇರಿ ಗಣ್ಯರು ಭಾಗಿಯಾಗಿದ್ದರು.

ವೇದಿಕೆಯಲ್ಲಿ ಶ್ರೀಗಳನ್ನು ನೆನೆದು ಸಂಸದ ಜಿಗಜಿಣಗಿ ಭಾವುಕರಾದರು. ಸಾಹಿತಿ ಕೆ.ಸಿ.ಶಿವಪ್ಪ ಮಾತನಾಡುತ್ತಾ, "ಸುತ್ತೂರು ಮಠದಿಂದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ದೇಶ-ವಿದೇಶ ಸುತ್ತಿ ಪ್ರವಚನ ಮಾಡಿದರು. ಈ ಮೂಲಕ ಕನ್ನಡಿಗರಷ್ಟೇ ಅಲ್ಲದೇ ವಿದೇಶದಲ್ಲಿರುವವರೂ ಸಹ ಶ್ರೀಗಳನ್ನು ಕಾಣುವಂತಾಯಿತು. ಅವರ ನುಡಿಗಳನ್ನು ಕೇಳುವ ಭಾಗ್ಯ ಅವರಿಗೆಲ್ಲ ಸಿಕ್ಕಿತು" ಎಂದರು.

ಕಣ್ಣೇರಿ ಶ್ರೀ ಕಾಡಸಿದ್ಧೇಶ್ವರ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, "ಶ್ರೀಗಳು ಎಷ್ಟರಮಟ್ಟಿಗೆ ಸರಳ ವ್ಯಕ್ತಿ ಎಂದರೆ, ಅವರು ತಮ್ಮ ಬಟ್ಟೆ ಹರಿದರೂ ಅದನ್ನು ತಮ್ಮ ಕೈಯಿಂದಲೇ ಹೊಲಿದು ಮತ್ತೆ ತೊಡುತ್ತಿದ್ದರು. ಒಂದು ದಿನ ಅಪ್ಪಾಜಿ ಬಟ್ಟೆ ಹರಿದಿದೆ ಬೇರೆ ಹೊಲಿಸೋಣ ಎಂದು ಹೇಳಿದಾಗ, ಬಟ್ಟೆ ಇರುವುದು ದೇಹ ಮುಚ್ಚೋಕೆ, ರಕ್ಷಣೆ ಮಾಡೋಕೆ. ಅದನ್ನು ಮತ್ತೊಬ್ಬರಿಗೆ ತೋರಿಸಲಿಕ್ಕೆ ಅಲ್ಲ ಎನ್ನುತ್ತಿದ್ದರು. ಇಷ್ಟೊಂದು ಸರಳ ರೀತಿಯಲ್ಲಿ ಬದುಕಿದಂಥವರು ಅಪ್ಪನವರು" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೂತ್ತೂರು ಮಠದ ಉತ್ತರಾಧಿಕಾರಿ ಜಯರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, "ಶ್ರೇಷ್ಠರಲ್ಲಿ ಅತ್ಯಂತ ಶ್ರೇಷ್ಠ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು. ಅವರಿದ್ದ ಸಮಯದಲ್ಲಿ ನಾವೂ ಇದ್ದೆವು ಎನ್ನುವುದೇ ನಮ್ಮ ಭಾಗ್ಯ ಮತ್ತು ಹೆಮ್ಮೆ. ಸಿದ್ಧೇಶ್ವರ ಅಪ್ಪನವರು ತಿಂಗಳುಗಟ್ಟಲೆ ಪ್ರವಚನಗಳನ್ನು ಮಾಡುತ್ತಿದ್ದರು. ಜನರಿಗೆ ಮನಮುಟ್ಟುವಂತೆ ತಮ್ಮ ಮಾತುಗಳನ್ನು ಹೇಳುತ್ತಿದ್ದರು. ಬದುಕಿನುದ್ದಕ್ಕೂ ಅತ್ಯಂತ ಸರಳವಾಗಿಯೇ ಬದುಕಿದವರು" ಎಂದು ಹೇಳಿದರು.

ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, "ಸಿದ್ಧೇಶ್ವರ ಸ್ವಾಮೀಜಿಯವರನ್ನು ಮಲ್ಲಿಕಾರ್ಜನ ಸ್ವಾಮೀಜಿಯವರು ನಮ್ಮೆಲ್ಲರಿಗೂ ನೀಡಿದ್ದಕ್ಕೆ ಮೊದಲು ನಾವು ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರಿಗೆ ಧನ್ಯವಾದ ಹೇಳಬೇಕು" ಎಂದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, "ಶ್ರೀಗಳಿಗಾಗಿ ಹಮ್ಮಿಕೊಂಡ ಈ ಗುರುನಮನ ಒಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಬೇಕು" ಎಂದು ಹೇಳಿದರು.

ಬಿಜ್ಜರಗಿ ಗ್ರಾಮದಲ್ಲಿ ಪಾದಯಾತ್ರೆ: ಸಿದ್ದೇಶ್ವರ ಸ್ವಾಮೀಜಿಯವರ ಜನ್ಮಸ್ಥಳ ಬಿಜ್ಜರಗಿ ಗ್ರಾಮದಲ್ಲಿ ಕೇವಲ 16 ಎತ್ತಿನ ಜೋಡಿಗಳು ಮಾತ್ರ ಉಳಿದಿವೆ.‌ ಹಾಗಾಗಿ ಎತ್ತುಗಳನ್ನು ಉಳಿಸುವ ರಾಜ್ಯ ಮಟ್ಟದ ಜನಜಾಗೃತಿ ಕಾರ್ಯಕ್ರಮವನ್ನು ಕೆಲವು ಉತ್ಸಾಹಿ ತರುಣರು ಪ್ರಾರಂಭಿಸಿದ್ದಾರೆ. ಎತ್ತುಗಳು ಉಳಿದರೆ ಮಾತ್ರ ಕೃಷಿ ಸಂಸ್ಕೃತಿ ಉಳಿಯಲು ಸಾಧ್ಯ ಎಂಬ ಸಂದೇಶ ನೀಡುವ ಉದ್ದೇಶದಿಂದ ಸಿದ್ದೇಶ್ವರ ಸ್ವಾಮೀಜಿಯ ಪ್ರಥಮ ಪುಣ್ಯ ಸ್ಮರಣೆಯಂದು ಬಿಜ್ಜರಗಿ ಗ್ರಾಮದಿಂದ ವಿಜಯಪುರ ನಗರದ ಆಶ್ರಮಕ್ಕೆ ಪಾದಯಾತ್ರೆಯ ಮೂಲ‌ಕ ಆಗಮಿಸಿದರು.

ಇದನ್ನೂ ಓದಿ:ಹೊಸ ವರ್ಷ: ಚಾಮರಾಜನಗರಕ್ಕೆ ಹರಿದು ಬಂದ ಪ್ರವಾಸಿಗರ ದಂಡು

ABOUT THE AUTHOR

...view details