ಕರ್ನಾಟಕ

karnataka

ETV Bharat / state

ವಿಜಯಪುರ ವಿಮಾನ ನಿಲ್ದಾಣಕ್ಕೆ ಮರುಜೀವ... 2ನೇ ಹಂತದ ಕಾಮಗಾರಿಗೆ ಗ್ರೀನ್ ಸಿಗ್ನಲ್

ಹಲವು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದ್ದ ವಿಜಯಪುರ ವಿಮಾಣ ನಿಲ್ದಾಣಕ್ಕೆ ಮತ್ತೆ ಜೀವ ಬಂದಿದೆ. ಹಲವು ಸಭೆಗಳ ಬಳಿಕ ರಾಜ್ಯ ಸರ್ಕಾರದಿಂದ 2ನೇ ಹಂತದ ಕಾಮಗಾರಿಗೆ ಸಿದ್ಧತೆ ನಡೆದಿದ್ದು, ವಿಜಯಪುರ ಜನತೆಯ ಬಹುದಿನಗಳ ಕನಸೀಗ ನನಸಾಗುವತ್ತ ಸಾಗಿದೆ.

Green signal to Vijayapur airport  for 2nd term construction by Government
ವಿಜಯಪುರ ವಿಮಾನ ನಿಲ್ದಾಣಕ್ಕೆ ಮರುಜೀವ...2ನೇ ಹಂತದ ಕಾಮಗಾರಿಗೆ ಗ್ರೀನ್ ಸಿಗ್ನಲ್

By

Published : Jul 9, 2020, 9:19 PM IST

ವಿಜಯಪುರ: ಐತಿಹಾಸಿಕ ನಗರಿ ವಿಜಯಪುರದಲ್ಲಿ ನನೆಗುದಿಗೆ ಬಿದ್ದಿರುವ ಬಹುಬೇಡಿಕೆಯ ವಿಮಾನ ನಿಲ್ದಾಣ ಕಾಮಗಾರಿಗೆ ಕೊನೆಗೂ ರಾಜ್ಯ ಸರ್ಕಾರ ಕಾಮಗಾರಿ ಮರು ಚಾಲನೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಕಳೆದ 2008ರಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ವಿಜಯಪುರ ತಾಲೂಕಿನ ಬುರಣಾಪುರ ಮತ್ತು ಮದಭಾವಿ ಗ್ರಾಮದ ಹೊರವಲಯದಲ್ಲಿ 727 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು.

ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲದೆ 220 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ದೇಶಿಯ ಪ್ರಯಾಣದ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ವಿಮಾನ ನಿಲ್ದಾಣ ಕಾಮಗಾರಿ ನಿರ್ವಹಿಸಲು ಮಾರ್ಗ್ ಪ್ರೈವೇಟ್ ಲಿಮಿಟೆಡ್‍ದೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.

ವಿಜಯಪುರ ವಿಮಾನ ನಿಲ್ದಾಣಕ್ಕೆ ಮರುಜೀವ... 2ನೇ ಹಂತದ ಕಾಮಗಾರಿಗೆ ಗ್ರೀನ್ ಸಿಗ್ನಲ್

ಮೊದಲ ಹಂತದಲ್ಲಿ ಲೇವಲಿಂಗ್ ರನ್ ವೇ, ಬಸ್ ನಿಲ್ದಾಣ, ಪಾರ್ಕಿಂಗ್ ವ್ಯವಸ್ಥೆ, ಟ್ಯಾಕ್ಸಿ ನಿಲ್ದಾಣ ಸೇರಿದಂತೆ ಬೇಸಿಕ್ ವ್ಯವಸ್ಥೆ ನಿರ್ಮಿಸಲು 95 ಕೋಟಿ ರೂ. ವೆಚ್ಚದ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಆದರೆ ಕಾಮಗಾರಿ ಮಂದಗತಿ ಹಾಗೂ ತಾಂತ್ರಿಕ ತೊಂದರೆಯಿಂದ 2014ರ ಅಕ್ಟೋಬರ್​​​ನಲ್ಲಿ ಸರ್ಕಾರ ಮಾರ್ಗ್ ಪ್ರೈವೇಟ್ ಲಿಮಿಟೆಡ್ ಜತೆ ಒಪ್ಪಂದವನ್ನು ಮುರಿದುಕೊಂಡ ಕಾರಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು.

ಈಗ ಸಚಿವ ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿಯಾದ ಮೇಲೆ ವಿಮಾನ ನಿಲ್ದಾಣ ಕಾಮಗಾರಿ ಕುರಿತು ಹಲವು ಅಧಿಕಾರಿಗಳ ಜತೆ ಸಭೆ ನಡೆಸಿ ಮುಖ್ಯಮಂತ್ರಿಗಳ ಬಳಿ ವಿಮಾನ ನಿಲ್ದಾಣದ ಅವಶ್ಯಕತೆ ಕುರಿತಂತೆ ಚರ್ಚೆ ನಡೆಸಿದ ಮೇಲೆ ಸಿಎಂ ಯಡಿಯೂರಪ್ಪ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಗ್ರೀನ್ ಸಿಗ್ನಲ್​​ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಶೀಘ್ರ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ:ವಿಜಯಪುರದಲ್ಲಿ ವಿಮಾನ ನಿಲ್ದಾಣವಾದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ. ವಿಶ್ವ ಪ್ರಸಿದ್ಧ ಗೋಲ ಗುಮ್ಮಟ, ಇಬ್ರಾಹಿಂ ರೋಜಾ ಸೇರಿ 84 ಸ್ಮಾರಕಗಳು ನಗರದಲ್ಲಿದ್ದು, ಇದು ಹೊರತುಪಡಿಸಿ ಆಲಮಟ್ಟಿ ಜಲಾಶಯದ ವಿಹಂಗಮ ನೋಟ, ಉದ್ಯಾನವನ ಸೇರಿದಂತೆ ಎಲ್ಲಾ ಸೌಕರ್ಯ ನೀಡಿ ವಿದೇಶಿಯರು ಹಾಗೂ ಬೇರೆ ಬೇರೆ ರಾಜ್ಯದ ಪ್ರವಾಸಿಗರನ್ನು ಸೆಳೆಯಬಹುದು.

ಎಂ.ಬಿ.ಪಾಟೀಲ್​​​ ಸ್ವಾಗತ:ವಿಜಯಪುರದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಅಭಿವೃದ್ಧಿಗೆ ಅನುಮೋದನೆ ನೀಡಿರುವುದು ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಅಭಿಪ್ರಾಯಪಟ್ಟಿದ್ದಾರೆ. ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಸಿಎಂ ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ABOUT THE AUTHOR

...view details