ವಿಜಯಪುರ: ತಾನು ಬಿದ್ದು ಹೋಗುವ ಮರ. ನನ್ನ ಮೊಮ್ಮಗ ಇನ್ನೂ ಬಾಳಿ ಬದುಕಬೇಕು ಎಂದು 73 ವರ್ಷದ ಅಜ್ಜಿಯೊಬ್ಬರು ತಮ್ಮ 21 ವರ್ಷದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ ಅಪರೂಪ ಘಟನೆಗೆ ನಗರದ ಯಶೋಧಾ ಆಸ್ಪತ್ರೆ ಸಾಕ್ಷಿಯಾಗಿದೆ. ಅಲ್ಲದೇ ವಿಜಯಪುರ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮೊದಲ ಯಶಸ್ವಿ ಮೂತ್ರಪಿಂಡ(ಕಿಡ್ನಿ) ಕಸಿ ಇದಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಅಂಗಾಂಗ ಕಸಿ ಅಗತ್ಯವಿರುವ ಲಕ್ಷಾಂತರ ಜನರಿಗೆ ಭರವಸೆ ಮೂಡಿಸಿದೆ.
ಅಂಗಾಂಗ ದಾನದ ಅರಿವು ಕಡಿಮೆ ಇರುವ ವಿಜಯಪುರ ಜಿಲ್ಲೆಯಲ್ಲಿ ಅಜ್ಜಿಯೊಬ್ಬರು ತಮ್ಮ ಮೊಮ್ಮಗನಿಗೆ ಕಿಡ್ನಿ ನೀಡಿರುವುದು ಅಪರೂಪದ ಪ್ರಕರಣ. ಬೆಳಗಾವಿ ಜಿಲ್ಲೆಯ ಹಾರೂಗೇರಿ ಯುವಕ ಸಚಿನ ಎಂಬಾತ ಕಳೆದ 18 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಇತ್ತೀಚೆಗೆ ಕಿಡ್ನಿ ವೈಫಲ್ಯವಾಗಿತ್ತು. ಈ ಕಾರಣಕ್ಕೆ ವಾರದಲ್ಲಿ 2ಕ್ಕಿಂತ ಹೆಚ್ಚು ಬಾರಿ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದ. ಈತನ ತಂದೆ-ತಾಯಿ ಅನಾರೋಗ್ಯ ಪೀಡಿತರಾದ ಕಾರಣ ಅವರ ಒಂದು ಕಿಡ್ನಿ ಪಡೆದು ಯುವಕನಿಗೆ ವರ್ಗಾಯಿಸಲು ಆಗುತ್ತಿರಲಿಲ್ಲ. ಯುವಕ ಸಚಿನ್ ದಯನೀಯ ಸ್ಥಿತಿ ಕಂಡ ಅವರ ಮನೆಯ ಹಿರಿಯ ಜೀವ(ಅಜ್ಜಿ) ಉದ್ದವ್ವ ಅವರು ಸ್ವ-ಇಚ್ಛೆಯಿಂದ ಕಿಡ್ನಿ ನೀಡಲು ಮುಂದಾಗಿದ್ದಾರೆ.
ಮೊದಲ ಯಶಸ್ವಿ ಮೂತ್ರಪಿಂಡ ಕಸಿ:ಆದರೆ ಕಿಡ್ನಿ ಕಸಿ ಮಾಡವ ಆಸ್ಪತ್ರೆಗಳು ಕೆಲ ಜಿಲ್ಲೆಯಲ್ಲಿ ಮಾತ್ರ ಇದ್ದವು. ಇತ್ತೀಚೆಗಷ್ಟೇ ವಿಜಯಪುರದ ಯಶೋಧಾ ಎಂಬ ಖಾಸಗಿ ಆಸ್ಪತ್ರೆ ಕಿಡ್ನಿ ಕಸಿಗೆ ಮಾನ್ಯತೆ ಪಡೆದುಕೊಂಡಿತ್ತು. ಯುವಕ ಸಚಿನ್ ಹಾಗೂ ಆತನ ಅಜ್ಜಿ ಉದ್ದವ್ವ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರದ್ದು ಹೊಂದಾಣಿಕೆಯಾಗುತ್ತಿತ್ತು. ಹೀಗಾಗಿ ಆಸ್ಪತ್ರೆಯ ಮುಖ್ಯಸ್ಥ ಡಾ.ರವೀಂದ್ರ ಮದ್ರಕಿ ನೇತ್ವತೃದ ತಂಡ ಮೂತ್ರಪಿಂಡ (ಕಿಡ್ನಿ) ಕಸಿಯನ್ನು ಯಶಸ್ವಿಯಾಗಿ ಮಾಡಿದೆ. ಸದ್ಯ ಕಿಡ್ನಿ ಪಡೆದ ಸಚಿನ ಹಾಗೂ ಕಿಡ್ನಿ ದಾನ ಮಾಡಿದ ಅಜ್ಜಿ ಉದ್ದವ್ವ ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ನಡೆದ ಮೊದಲ ಕಿಡ್ನಿ ಕಸಿ ಯಶಸ್ವಿಯಾಗಿದೆ.