ಕರ್ನಾಟಕ

karnataka

ETV Bharat / state

ಮೊಮ್ಮಗನ ಮೃತದೇಹ ನೋಡಿ ಆಘಾತ.. ಕ್ಷಣದಲ್ಲೇ ಹಾರಿಹೋಯ್ತು ತಾತನ ಪ್ರಾಣ - road accident in vijayapura

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೊಮ್ಮಗ - ಮೃತದೇಹ ನೋಡಿ ತಾತನಿಗೆ ಆಘಾತ - ಕ್ಷಣದಲ್ಲೇ ಹಾರಿಹೋಯ್ತು ಪ್ರಾಣ

grandfather and grandson death
ಸಾವಿನಲ್ಲೂ ಒಂದಾದ ಜೋಡಿ

By

Published : Mar 1, 2023, 10:13 AM IST

Updated : Mar 1, 2023, 12:20 PM IST

ವಿಜಯಪುರ: ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಮೊಮ್ಮಗನ ಮೃತ ದೇಹ ಕಂಡು ತಾತನೂ ಕೂಡ ಹೃದಯಸ್ತಂಭನದಿಂದ ಇಹಲೋಕ ತ್ಯಜಿಸಿದ ಘಟನೆ ಜಿಲ್ಲೆಯ ಗೊಳಸಂಗಿ ಸಮೀಪದ ವಂದಾಲ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ವಂದಾಲ ಗ್ರಾಮದ ಅಭಿಷೇಕ ಚಂದ್ರಶೇಖರ ಪ್ಯಾಟಿಗೌಡ್ರ (18) ಮೃತ ವಿದ್ಯಾರ್ಥಿ. ಈತ ಗುಳೇದಗುಡ್ಡದ ಅವರ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದನು.‌ ಸೋಮವಾರ ರಾತ್ರಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಟಿಪ್ಪರ್​ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌

ಸುದ್ದಿ ತಿಳಿದ ಮೃತ ಅಭಿಷೇಕನ ತಾಯಿ ಮತ್ತು ತಂದೆ ಜೊತೆ ಹುನಗುಂದ ತಾಲೂಕು ಅಮೀನಗಡದ ಬಸಪ್ಪ ರಾಮಪ್ಪ ಗುಡ್ಡದ (74) ಇವರು ಗುಳೇದಗುಡ್ಡಕ್ಕೆ ಬಂದಿದ್ದಾರೆ. ಅಲ್ಲಿ ಮೊಮ್ಮಗನ ಮೃತದೇಹ ನೋಡಿದ ತಾತ ಬಸಪ್ಪ ಅವರಿಗೆ ತೀವ್ರ ಹೃದಯಸ್ತಂಭನ ಉಂಟಾಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಧ್ಯೆ ಪ್ರಾಣಪಕ್ಷಿ ಹಾರಿಹೋಗಿದೆ. ಮೊಮ್ಮಗ ಹಾಗೂ ತಾತನ ಅಂತ್ಯಕ್ರಿಯೆಯನ್ನು ವಂದಾಲ ಗ್ರಾಮದಲ್ಲಿ ರಾತ್ರಿ ಒಟ್ಟೊಟ್ಟಿಗೆ ನೆರವೇರಿಸಲಾಯಿತು.

'ಮಂಗಳವಾರ ರಾತ್ರಿ ತನ್ನ ಸ್ನೇಹಿತನ ಜೊತೆ ಬೈಕ್​ನಲ್ಲಿ ಹೋಗುತ್ತಿದ್ದಾಗ ದಿಢೀರ್​ ಟಿಪ್ಪರ್​​ ಲಾರಿ ಎದುರಿಗೆ ಬಂದಿದೆ. ಇದನ್ನು ಕಂಡ ಹಿಂಬದಿ ಸವಾರ ಬೈಕ್​ನಿಂದ ಜಿಗಿದು ಪ್ರಾಣ ಉಳಿಸಿಕೊಂಡರೆ, ಬೈಕ್​ ಚಲಾಯಿಸುತ್ತಿದ್ದ ಅಭಿಷೇಕ್​​ ಟಿಪ್ಪರ್​ಗೆ​​ ಸಿಲುಕಿ ಸಾವನ್ನಪ್ಪಿದ್ದಾನೆ. ಬಳಿಕ ಗುಳೇದಗುಡ್ಡದಲ್ಲಿ ಅಭಿಷೇಕ್​ ಮೃತದೇಹವನ್ನು ಇಡಲಾಗಿತ್ತು. ಮೊಮ್ಮಗನ ಮೃತದೇಹ ನೋಡಲು ತಾತ ಬಸಪ್ಪ ತೆರಳಿದ್ದರು. ಆ ಸಂದರ್ಭದಲ್ಲಿ ಮೊಮ್ಮಗನ ಶವ ಕಂಡು ದುಃಖ ತಡೆಯಲಾರದೆ ಕುಸಿದುಬಿದ್ದು ಅವರೂ ಕೂಡ ಮೃತರಾಗಿದ್ದಾರೆ. ಇದರಿಂದ ಒಟ್ಟಿಗೆ ಇಬ್ಬರನ್ನು ಕಳೆದುಕೊಂಡಿದ್ದೇವೆ. ಇವರಿಬ್ಬರ ಸಾವಿನಿಂದ ನಮ್ಮ ಕುಟುಂಬಕ್ಕೆ ತೀವ್ರ ಆಘಾತವಾಗಿದೆ' ಎಂದು ಮೃತ ಅಭಿಷೇಕ್​ನ ದೊಡ್ಡಪ್ಪ ಆರ್.ಎಸ್. ಪ್ಯಾಟೇಗೌಡ್ರ ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪ್ರೀತಿಯಲ್ಲಿ ಗೆದ್ದು, ಸಾವಿನಲ್ಲಿ ಒಂದಾದ ಜೋಡಿ : ಹನುಮಂತ-ಶೃತಿ ದುರಂತ ಪ್ರೇಮಕಥೆ

ಸಾವಿನಲ್ಲೂ ಒಂದಾದ ರೈತ ಸಂಘದ ಗೆಳೆಯರು: ಕಳೆದ ಜ.19 ರಂದು ನಿವೃತ್ತ ಅರಣ್ಯಾಧಿಕಾರಿ, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಹವಾಲ್ದಾರ ಅಕಾಲಿಕ ಮರಣ ಹೊಂದಿದ್ದರು. ಈ ಬೆನ್ನಲ್ಲೇ, ಅದೇ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸಪ್ಪ ಶಿವಲಿಂಗಪ್ಪ ಅಮ್ಮಣ್ಣನವರ್ ಫೆ.2ಕ್ಕೆ ನಿಧನರಾಗಿದ್ದರು. ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಮೃತಪಟ್ಟ 15 ದಿನಗಳ ಅಂತರದಲ್ಲಿ ಪ್ರಧಾನ ಕಾರ್ಯದರ್ಶಿ ಬಸಪ್ಪ ಕೊನೆಯುಸಿರೆಳೆಯುವ ಮೂಲಕ ರೈತ ಸಂಘದ ಈ ಸ್ನೇಹಿತರು ಸಾವಿನಲ್ಲೂ ಒಂದಾಗಿದ್ದರು.

ಇದನ್ನೂ ಓದಿ:ಒಂದೇ ಮರ,ಒಂದೇ ವೇಲ್‌, ಸಾವಿನಲ್ಲಿ ಒಂದಾದ ಅಮರ ಪ್ರೇಮಿಗಳು!

ಸಾವಿನಲ್ಲೂ ಒಂದಾದ ದಂಪತಿ: ಕಳೆದ ವರ್ಷ ಅಂದ್ರೆ, ಡಿ. 25ರ 2022ರಲ್ಲಿ ದಾವಣಗೆರೆಯಲ್ಲಿ ಸಹ ಇಂತಹದೇ ಘಟನೆ ನಡೆದಿತ್ತು. ನಗರದ ಎಸ್ಓಜಿ ಕಾಲೋನಿಯ ನಿವಾಸಿ ಫಕೀರಪ್ಪ ಗೋಖಾವಿ (87), ಚಂದ್ರಮ್ಮ ಫಕೀರಪ್ಪ ಗೋಖಾವಿ ಒಟ್ಟೊಟ್ಟಿಗೆ ಕೊನೆಯುಸಿರೆಳೆದಿದ್ದರು. ಫಕೀರಪ್ಪನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಅದರೇ ಇದ್ದಕ್ಕಿದ್ದಂತೆ ಫಕೀರಪ್ಪ ಹೃದಯ ಸ್ತಂಭನದಿಂದ ಕುಸಿದು ಬಿದ್ದಿದ್ದಾರೆ. ಪತಿ ಕುಸಿದುಬಿದ್ದಿವುದನ್ನು ಗಮನಿಸಿದ ಪತ್ನಿ ಚಂದ್ರಮ್ಮ ಸಹ ನೋಡ ನೋಡುತ್ತಿದ್ದಂತೆ ದಿಢೀರ್ ಆಕಾಶವೇ ತಲೆ ಮೇಲೆ ಬಿದ್ದಂತೆ ಆಘಾತವಾಗಿದೆ. ಇಬ್ಬರೂ ಕೂಡ ಕೆಲವೇ ಕ್ಷಣಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈ ವೃದ್ಧ ದಂಪತಿ ಸಾವಿನಲ್ಲೂ ಜೊತೆಯಾಗಿದ್ದರು.

ಇದನ್ನೂ ಓದಿ:15 ದಿನಗಳ ಅಂತರದಲ್ಲಿ ಇಬ್ಬರು ನಿಧನ.. ಸಾವಿನಲ್ಲೂ ಒಂದಾದ ರೈತ ಸಂಘದ ಗೆಳೆಯರು

Last Updated : Mar 1, 2023, 12:20 PM IST

ABOUT THE AUTHOR

...view details