ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠ ಜಾತ್ಯಾತೀತ ಮಠ. ಮಾಧವಾನಂದ ಪ್ರಭುಜಿ ತಮ್ಮ ಜೀವಿತಾವಧಿಯ ತುಂಬೆಲ್ಲ ಮಾಡಿದ್ದು ಬ್ರಿಟಿಷರ ವಿರುದ್ಧದ ಹೋರಾಟ. ತಮ್ಮ ಮಠದ ಸಾವಿರಾರು ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದ ರಾಷ್ಟ್ರದ ಏಕೈಕ ಸಂತ ಅನ್ನೋ ಹೆಗ್ಗಳಿಕೆಗೆ ಪಾತ್ರರಾದವರು. ಆದರೆ ಮಾಧವಾನಂದ ಪ್ರಭುಜಿ ಅವರ ಸ್ವಾತಂತ್ರ್ಯ ಹೋರಾಟವನ್ನು ಸರ್ಕಾರ, ಜಿಲ್ಲಾಡಳಿತ ಗುರುತಿಸಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ರಾಷ್ಟ್ರದ ಬೆರಳಣಿಕೆ ಮಠಗಳ ಪೈಕಿ ಇಂಚಗೇರಿ ಮಠವೂ ಒಂದಾಗಿದೆ. 1935ರ ವೇಳೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಾಧವಾನಂದ ಪ್ರಭುಜಿಗಳು ತಮ್ಮೊಂದಿಗೆ 20ಸಾವಿರಕ್ಕೂ ಅಧಿಕ ಭಕ್ತರನ್ನು ಹೋರಾಟದಲ್ಲಿ ಧುಮುಕಿಸಿದ್ದರು.
1929ರ ಎಳೆಯ ಪ್ರಾಯದಲ್ಲೇ ಮಾಧವಾನಂದರು ಹೇಗಾದರು ಮಾಡಿ ಬ್ರಿಟಿಷರನ್ನು ತೊಲಗಿಸಲು ನಿರ್ಧರಿಸಿ ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನು ಕಿತ್ತುಹಾಕಿ ಠಾಣೆಗಳನ್ನು ಧ್ವಂಸಗೊಳಿಸಿದ್ದರು.