ವಿಜಯಪುರ: ಕೊರೊನಾ ಮಹಾಮಾರಿ ಸರ್ಕಾರಿ ಕಚೇರಿಗಳನ್ನು ಬೆಂಬಿಡದೆ ಕಾಡುತ್ತಿದೆ. ಕೇವಲ ಎರಡು ಕಚೇರಿಗೆ ಸೀಮಿತವಾಗಿದ್ದ ಸೀಲ್ ಡೌನ್ ಪ್ರಕ್ರಿಯೆ ಈಗ ಸಾರ್ವಜನಿಕರು ಹೆಚ್ಚು ಸಂಪರ್ಕಿಸುವ ಸರ್ಕಾರಿ ಕಚೇರಿಗಳಿಗೂ ಹಬ್ಬಿದ್ದು, ಸಾಕಷ್ಟು ಆತಂಕ ಮೂಡಿಸಿದೆ. ಕೆಲಸ ಮಾಡುವ ನೌಕರರು, ಕಚೇರಿಗೆ ಬರುವ ಸಾರ್ವಜನಿಕರಲ್ಲಿಯೂ ಕೊರೊನಾ ತಗಲುವ ಆತಂಕ ಶುರುವಾಗಿದೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ನೀರು ಸರಬರಾಜು ಮಂಡಳಿ, ಕೆಇಬಿ ಹೀಗೆ ಹೆಚ್ಚು ಸಾರ್ವಜನಿಕರು ಅಲೆದಾಡುವ ಹಲವಾರು ಕಚೇರಿಗಳು ಕೊರೊನಾ ಸೋಂಕಿನಿಂದಾಗಿ ಸೀಲ್ ಡೌನ್ ಆಗಿವೆ. ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಇಲ್ಲಿಯವರೆಗೆ 14 ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. ಸ್ವತಃ ಎಸ್ಪಿ ಅನುಪಮ್ ಅಗರವಾಲ್ ಹೋಂ ಕ್ವಾರಂಟೈನ್ ಮುಗಿಸಿ ಬಂದಿದ್ದಾರೆ. ತಹಸೀಲ್ದಾರ್ ಕಚೇರಿಯ ನಾಲ್ವರಿಗೆ ಕೊರೊನಾ ಇರುವುದು ದೃಢವಾಗಿದ್ದು, ಕಚೇರಿಯನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ.