ಮುದ್ದೇಬಿಹಾಳ: ಜನರ ಅನುಕೂಲಕ್ಕಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ವ್ಯಾಕ್ಸಿನೇಷನ್ ಕೇಂದ್ರವನ್ನು ಕೆಬಿಎಂಪಿಎಸ್ ಶಾಲೆಗೆ ಸ್ಥಳಾಂತರಿಸಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಕೆಬಿಎಂಪಿಎಸ್ ಶಾಲೆಗೆ ಗುರುವಾರ ಭೇಟಿ ನೀಡಿ ಲಸಿಕಾ ಕೇಂದ್ರದ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಸಾರ್ವಜನಿಕರ ಬೇಡಿಕೆಯಂತೆ ತಾಲೂಕು ಆಸ್ಪತ್ರೆಯಲ್ಲಿದ್ದ ಲಸಿಕಾ ಕೇಂದ್ರದಿಂದ ಅಲ್ಲಿ ಲಸಿಕೆ ಪಡೆದುಕೊಳ್ಳಲು ಬರುವವರಿಗೆ ಸೋಂಕು ಹರಡುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಕೇಂದ್ರ ಬದಲಾವಣೆ ಮಾಡಿ ಕೆಬಿಎಂಪಿಎಸ್ ಶಾಲೆಗೆ ಸ್ಥಳಾಂತರಿಸಲಾಗುತ್ತದೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಶಾಲೆಯಲ್ಲಿ ತೆರೆದಿರುವ ಲಸಿಕಾ ಕೇಂದ್ರದಲ್ಲಿ ಮೇ.14 ರಿಂದ ಲಸಿಕೆ ಹಾಕುವ ಕೆಲಸ ನಿರಂತರವಾಗಿ ಮಾಡಲಾಗುತ್ತದೆ. ತಾಲೂಕಿನಲ್ಲಿ ಈಗಾಗಲೇ 84 ಸಾವಿರ ಜನ ಲಸಿಕೆ ಪಡೆದುಕೊಂಡಿದ್ದು, 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆ ನೀಡಿಕೆಗೆ ಇನ್ನೂ 6,083 ಉಳಿದಿದ್ದು, ಅವರಿಗೆ ಲಸಿಕೆ ನೀಡಲಾಗುತ್ತದೆ ಎಂದರು.
18-45 ವರ್ಷ ವಯೋಮಿತಿಯಲ್ಲಿರುವವರಿಗೆ ಸೆಕೆಂಡ್ ಡೋಸ್ ಮುಗಿದ ಬಳಿಕ ಪ್ರಥಮ ಹಂತದ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಲಾಗುವುದು. ಆಕ್ಸಿಜನ್ ಹೊಂದಿರುವ ಮೊಬೈಲ್ ವ್ಯಾನ್ ಅಗತ್ಯಬಿದ್ದರೆ ಅದನ್ನು ತರಿಸಲಾಗುತ್ತದೆ. ಪ್ರಥಮವಾಗಿ ಆಕ್ಸಿಜನ್ ಬೆಡ್ ಸರ್ವಿಸ್ ಆರಂಭವಾಗಿದ್ದು, ಮುದ್ದೇಬಿಹಾಳದಲ್ಲಿ ಮಾಡಲಾಗಿದೆ. ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದಿಸುವ ಆಕ್ಸಿಜನ್ ಪ್ಲಾಂಟ್ ಕಾರ್ಯ ಪ್ರಗತಿಯಲ್ಲಿದೆ. ಸದ್ಯಕ್ಕೆ ಮೂರು ವೆಂಟಿಲೇಟರ್ ಆಕ್ಸಿಜನ್ ಬೆಡ್ ವ್ಯವಸ್ಥೆ ಇದ್ದು, ಇನ್ನೂ ಮೂರು ವೆಂಟಿಲೇಟರ್ ಬೆಡ್‌ಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದ್ದು, ವಾರದಲ್ಲಿ ಪೂರ್ಣಗೊಳ್ಳಲಿದೆ. ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ತರಿಸಿಕೊಳ್ಳಲು ಚಿಂತನೆ ಇದೆ ಎಂದು ಹೇಳಿದರು.
ನಿಮ್ಮ ಜೀವ ಮುಖ್ಯ: ವ್ಯಾಪಾರಸ್ಥರು ಹದಿನೈದು ದಿನಗಳ ಕಾಲ ಅಂಗಡಿ ಬಂದ್ ಮಾಡಿ. ಕೊರೊನಾ ಹೋದ ಮೇಲೆ ಅಂಗಡಿ ತೆರೆದು ಜೀವನ ನಡೆಸೋಣ. ದೊಡ್ಡ ದೊಡ್ಡ ಕಿರಾಣಿ ಅಂಗಡಿಕಾರರೂ ಕೂಡಾ ಸ್ವಯಂಪ್ರೇರಿತರಾಗಿ ಬಂದ್ ಮಾಡಿ. ಹಳ್ಳಿಗಳ ಜನ ಹೊಲಕ್ಕೆ ಹೋಗಿ ಕೆಲಸ ಮಾಡಲಿ. ಜನರು ಸರ್ಕಾರದ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ನಮ್ಮ ಜೀವ ನಮ್ಮ ಕೈಯ್ಯಲ್ಲಿದೆ. ಗ್ರಾಮೀಣ ಜನ ಎರಡು ವಾರ ಪಟ್ಟಣಕ್ಕೆ ಬರುವುದಕ್ಕೆ ಹೋಗಬೇಡಿ ಎಂದುಎ.ಎಸ್.ಪಾಟೀಲ ನಡಹಳ್ಳಿ ಮನವಿ ಮಾಡಿದರು.