ಮುದ್ದೇಬಿಹಾಳ(ವಿಜಯಪುರ) :ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಸಂಖ್ಯೆ 4ರ ಮೇಲೆ ಮಾತನಾಡಿದ ಸದಸ್ಯರು, ಅಭಿವೃದ್ಧಿಗೊಳ್ಳದೇ ಇರುವ ಲೇಔಟ್ ಮಾಲೀಕರಿಗೆ ನೋಟಿಸ್ ನೀಡಿ ಅಭಿವೃದ್ಧಿಪಡಿಸಿಕೊಂಡ ಬಳಿಕ ಅವರಿಗೆ ನಿವೇಶನದ ಉತಾರ ನೀಡಬೇಕು. ಒಂದು ವೇಳೆ ಅಭಿವೃದ್ಧಿಗೊಳ್ಳದೇ ಇರುವ ಲೇಔಟ್‌ಗಳಿಗೆ ಉತಾರ ನೀಡುವಂತೆ ಅರ್ಜಿಗಳು ಬಂದರೆ ಅವುಗಳಿಗೆ ಮನ್ನಣೆ ನೀಡಬಾರದು ಎಂದು ಸೂಚಿಸಿದರು.
ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಮಾತನಾಡಿ, ಅನಧಿಕೃತ ಲೇಔಟ್‌ಗಳ ಕುರಿತಾಗಿ ಯಾರು ಲೇಔಟ್ ಅಭಿವೃದ್ಧಿಪಡಿಸಿಲ್ಲವೋ ಅವರಿಗೆ ನೋಟಿಸ್ ನೀಡಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ 58 ಲೇಔಟ್‌ಗಳಿದ್ದು ಪಂಚಾಯತ್ ವ್ಯಾಪ್ತಿಯಲ್ಲಿ ಸೇರ್ಪಡೆಯಾದ 73 ಲೇಔಟ್ ಇವೆ. ಇನ್ನೂ ಕೆಲವು ಫೈಲ್ ಸಿಕ್ಕಿಲ್ಲ. ಡಿ.18ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಅಭಿವೃದ್ಧಿಗೊಳ್ಳದ ಲೇಔಟ್‌ಗಳ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲು ವಿನಂತಿಸಲಾಗಿದೆ ಎಂದು ಹೇಳಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳಿಗೆ ಪಿಐಡಿ ಸಂಖ್ಯೆ ಹಾಕಲು ಸದಸ್ಯರು ಸೂಚಿಸಿದರು. ಇದಕ್ಕೆ ಉತ್ತರಿಸಿದ ಕಂದಾಯಾಧಿಕಾರಿ ಎಂ ಬಿ ಮಾಡಗಿ, ಈಗಾಗಲೇ 12,350 ಆಸ್ತಿಗಳಿಗೆ ಪಿಐಡಿ ಸಂಖ್ಯೆ ದಾಖಲಿಸಲಾಗಿದೆ.
ಬಾಕಿ 6 ಸಾವಿರ ಆಸ್ತಿಗಳಿಗೆ ಪಿಐಡಿ ಸಂಖ್ಯೆ ಹಾಕಬೇಕಿದೆ ಎಂದರು. ಸದಸ್ಯರು ಅಲ್ಲಿಯವರೆಗೆ ಕೈ ಬರಹದ ಉತಾರೆಯನ್ನು ಬಂದ್ ಮಾಡುವಂತೆ ಸೂಚಿಸಿದರು. ಪುರಸಭೆಗೆ ಕೆಲಸಕ್ಕೆ ನಿಯೋಜನೆಯಾದ ದಿನದಿಂದ ಈವರೆಗೆ ಕೆಲಸಕ್ಕೆ ಬಾರದೇ ಅನಧಿಕೃತವಾಗಿ ಗೈರು ಉಳಿದಿರುವ ಶರ್ಮಿಳಾ ಇಟಗಿ ಅವರನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು.