ವಿಜಯಪುರ :ಐತಿಹಾಸಿಕ ಗೋಳಗುಮ್ಮಟ ಸೇರಿ ವಿಜಯಪುರ ಜಿಲ್ಲೆಯ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ತಂಡ ತಂಡವಾಗಿ ಬರುತ್ತಿದ್ದಾರೆ. ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾದ ಬಳಿಕ ಕಸ ವಿಲೇವಾರಿಯ ಸಮಸ್ಯೆ ಕಾಡುತ್ತಿದೆ.
ನಗರ ಹಾಗೂ ಸುತ್ತಲಿನ ಪ್ರವಾಸಿ ತಾಣಗಳಲ್ಲಿ ನಿತ್ಯ ಕಸ ಎಸೆಯುವುದು ಮತ್ತೆ ಶುರುವಾಗಿದೆ. ನಗರದ ಹೃದಯ ಭಾಗದಲ್ಲಿರುವ ಬಾರಾ ಕಮಾನ್ ಕಸದ ತಿಪ್ಪೆ ಗುಂಡಿಯಂತಾಗಿದೆ.
ಜನ ಕುಟುಂಬದ ಜತೆ ಕಾಲ ಕಳೆಯಲು ಪ್ರವಾಸಿ ತಾಣಗಳಿಗೆ ಬರುತ್ತಿದ್ದಾರೆ. ಸ್ಥಳ ವೀಕ್ಷಿಸಿ ಅಲ್ಲಿಯೇ ಊಟ ಮಾಡಿ ಕಸ ಎಸೆಯುತ್ತಿದ್ದಾರೆ. ಬೆಳಗ್ಗೆ ವಾಯುವಿಹಾರಕ್ಕೆ ಬಂದಾಗ ಕಂಡ ಕಂಡಲ್ಲಿ ಸಾರ್ವಜನಿಕರು ಕಸ ಎಸೆದು ಹೋಗುತ್ತಿದ್ದಾರೆ.
ಇದರಿಂದ ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೆ ಇರುಸುಮುರುಸು ಆಗುತ್ತಿದೆ. ಜನ ಪ್ರವಾಸಿ ತಾಣದಲ್ಲಿ ಗುಟ್ಕಾ ತಿನ್ನುವುದು ಸಾಮಾನ್ಯವಾಗಿದೆ. ಬಾರಾ ಕಮಾನ್ ಬಳಿ ಮೂತ್ರ ವಿಸರ್ಜನೆ, ಮದ್ಯ ಸೇವನೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ತಿಪ್ಪೆ ಗುಂಡಿಯಂತಾದ ಬಾರಾ ಕಮಾನ್ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಜುಮ್ಮಾ ಮಸೀದಿ ಹೊರತುಪಡಿಸಿದ್ರೆ ಯಾವ ಪ್ರವಾಸಿ ತಾಣಗಳ ವೀಕ್ಷಣೆಗೆ ಶುಲ್ಕ ನಿಗದಿ ಮಾಡಿಲ್ಲ. ಹೀಗಾಗಿ, ಗೋಳಗುಮ್ಮಟ, ಇಬ್ರಾಹಿಂ ರೋಜಾದಲ್ಲಿ ಸಾಕಷ್ಟು ಸಿಬ್ಬಂದಿಯನ್ನು ಪ್ರಾಚ್ಯವಸ್ತು ಇಲಾಖೆ ನೇಮಕ ಮಾಡಿದೆ.
ಅಲ್ಲಿ ಕಸ ಎಸೆಯುವುದು, ತುಂಬಾಕು, ಸಿಗರೇಟ್ ಸೇದುವುದು ನಿಷೇಧವಿದೆ. ಆದರೆ, ಬಾರಾ ಕಮಾನ್ ವೀಕ್ಷಣೆಗೆ ಯಾವುದೇ ಶುಲ್ಕವಿಲ್ಲ.ಕೇವಲ ಒಬ್ಬ ಭದ್ರತಾ ಸಿಬ್ಬಂದಿ ಮಾತ್ರ ಇದ್ದಾರೆ. ಇದರಿಂದ ರಾತ್ರಿ ಅನೈತಿಕ ಚಟುವಟಿಕೆ ನಡೆಯುತ್ತದೆ.
ಮಹಾನಗರ ಪಾಲಿಕೆ ನಿತ್ಯ ಕಸ ವಿಲೇವಾರಿ ಮಾಡಲು ವಾಹನ ವ್ಯವಸ್ಥೆ ಮಾಡಿದೆ. ಆದರೆ, ಯಾರಾದ್ರೂ ಕಸಗುಡಿಸಿ ಇಟ್ಟರೆ ಭದ್ರತಾ ಸಿಬ್ಬಂದಿ ಅದನ್ನು ವಾಹನಕ್ಕೆ ತುಂಬುತ್ತಾರೆ. ಇಲ್ಲವಾದ್ರೆ ಇಲ್ಲ. ಬಾರಾ ಕಮಾನ್ ಬಳಿ ಕಸ ತೆಗೆಯುವ ಸಿಬ್ಬಂದಿ ಇದ್ದಾರೆ.
ಆದರೆ, ಅವರು ಬರುವುದು 15 ದಿನಕ್ಕೊಮ್ಮೆ ಮಾತ್ರ. ಹೀಗಾಗಿ, ಪ್ರವಾಸಿ ತಾಣಗಳು ಕಸದ ಕೊಂಪೆಯಾಗಿವೆ. ಪ್ರವಾಸೋಧ್ಯಮ ಹಾಗೂ ಪುರಾತತ್ವ ಇಲಾಖೆ ಜಂಟಿಯಾಗಿ ಪ್ರವಾಸಿತಾಣ ಕಸಮುಕ್ತವಾಗಿಸಲು ಶ್ರಮಿಸಿದ್ರೆ ಮಾತ್ರ ಪ್ರವಾಸೋದ್ಯಮ ಬೆಳೆಯಲು ಸಾಧ್ಯ.