ವಿಜಯಪುರ : ಜಿಲ್ಲೆಯಲ್ಲಿ ನಾಲ್ಕನೇ ಹಂತದ ಕೋವಿಡ್ ಲಸಿಕೆ ಅಭಿಯಾನ ಏಪ್ರಿಲ್ 1 ರಿಂದ ಆರಂಭವಾಗುತ್ತಿದ್ದು, ನೋಂದಣಿ ಮಾಡಿಕೊಳ್ಳುವ ಮೂಲಕ 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಲಸಿಕೆ ಪಡೆಯುವವರು ನೇರವಾಗಿ ಆನ್‍ಲೈನ್ ಮತ್ತು ವೆಬ್‍ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಅಥವಾ ಸಮೀಪದ ಲಸಿಕಾ ವಿತರಣಾ ಕೇಂದ್ರಕ್ಕೆ ತೆರಳಿ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಸಮಯದಲ್ಲಿ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆ ನೀಡಬೇಕು. ಆನ್‍ಲೈನ್ ನೋಂದಣಿ ಮಾಡುವ ವೇಳೆಯೇ ಲಸಿಕೆ ಪಡೆಯಲು ಸಮೀಪದ ಆರೋಗ್ಯ ಕೇಂದ್ರ ಮತ್ತು ದಿನ ಆಯ್ಕೆ ಮಾಡುವ ಅವಕಾಶವಿದೆ. ಒಂದು ವೇಳೆ ಆಯ್ಕೆ ಮಾಡಿದ ದಿನ ಲಸಿಕೆ ಪಡೆಯಲು ಸಾಧ್ಯವಾಗದಿದ್ದರೆ ಬದಲಿ ದಿನ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರ ಸೇರಿ 10 ಜಿಲ್ಲೆಗಳಲ್ಲಿ ಹೆಚ್ಚಿದ ಕೊರೊನಾ: ಕೇಂದ್ರ ಆರೋಗ್ಯ ಇಲಾಖೆ ಆತಂಕ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ವಿತರಿಸಲಾಗುತ್ತದೆ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ಗೆ 250 ರೂ. ದರ ನಿಗದಿ ಮಾಡಲಾಗಿದೆ. ಮೊದಲ ಡೋಸ್ ಪಡೆದ 28 ದಿನಕ್ಕೆ ಎರಡನೆಯ ಡೋಸ್ ಪಡೆಯಬೇಕು.
ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಾದ ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ ಹಾಗೂ ಸಿಂದಗಿಯಲ್ಲಿ ಉಚಿತ ಲಸಿಕೆ ನೀಡಲಾಗುತ್ತಿದೆ. ಖಾಸಗಿ ಆರೋಗ್ಯ ಸಂಸ್ಥೆಗಳಾದ ಬಿ.ಎಲ್.ಡಿ.ಈ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಅಲ್-ಅಮೀನ್ ವೈದ್ಯಕೀಯ ಮಹಾ ವಿದ್ಯಾಲಯಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ ಎಂದಿದ್ದಾರೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲೆಯ ಸರ್ಕಾರಿ ಆರೋಗ್ಯ ಉಪಕೇಂದ್ರಗಳಲ್ಲಿ ಶೇ.100 ರಷ್ಟು ಆನ್‍ಲೈನ್ ನೋಂದಣಿ ಮಾಡಿಸಲು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಕೋವಿಡ್-19 ಲಸಿಕೆಯ ಕುರಿತು ಮನವೊಲಿಸಿ, ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಸಹಾಯಕರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಸರ್ಕಾರಿ ಆಸ್ಪತ್ರೆ ಹಾಗೂ ಗ್ರಾಮೀಣ ಪ್ರದೇಶಗಳ ಆಯ್ದ ಆರೋಗ್ಯ ಉಪಕೇಂದ್ರಗಳಲ್ಲಿ ಬೆಳಗ್ಗೆ 10 ರಿಂದ 4 ಗಂಟೆಯವರೆಗೆ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ ಇದುವರೆಗೆ 46,438 ಹಿರಿಯ ನಾಗರಿಕರು, ಇತರೆ ಕಾಯಿಲೆಗಳಿಂದ ಬಳಲುತ್ತಿರುವ 22,925 ಜನರು, ಮುಂಚೂಣಿ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.