ವಿಜಯಪುರ:ಮುಳವಾಡ ಏತ ನೀರಾವರಿ ಯೋಜನೆಯಡಿ ಕಾಲುವೆಗೆ ಗಂಗಾಪೂಜೆ ಮಾಡಿದ ವಿಚಾರವಾಗಿ ಮಾಜಿ ಸಚಿವ ಎಂ ಬಿ ಪಾಟೀಲ ವಿರುದ್ಧ ಮಾಜಿ ಸಚಿವ ಶಿವಾನಂದ ಪಾಟೀಲ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಾನಂದ ಪಾಟೀಲ್, ಜಿಲ್ಲಾ ನೀರಾವರಿಗೆ ನಾನೂ ಕೆಲಸ ಮಾಡಿದ್ದೇನೆ. ನನ್ನ ಕ್ಷೇತ್ರದ ಸಲುವಾಗಿ ಯಾರಾದರೂ ಅವರ ಸ್ವಂತ ಹಣ ಖರ್ಚು ಮಾಡಿದ್ದರೆ ನಾನು ನೀಡುತ್ತೇನೆ. ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಲು ಬೇರೆ ಶಾಸಕರು ಬೇಡ ಎಂದ ಅವರು, ನಾನು ಅವರ ಕ್ಷೇತ್ರದಲ್ಲಿ ಕೈ ಹಾಕಿದರೆ ಹೇಗೆ? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಶಿವಾನಂದ ಪಾಟೀಲ್.. ಶಾಸಕರ ನಡುವಿನ ವೈಮನಸ್ಸಿಗೆ ಅವರ ಪುತ್ರರು ಟ್ವೀಟ್ ಮಾಡುವುದು ಸರಿಯಲ್ಲ. ಈ ರೀತಿ ಟ್ವೀಟ್ ಮಾಡುವುದು ಇಲ್ಲಿಗೆ ನಿಲ್ಲಬೇಕು. ನಮ್ಮ ಮುಂದಿನ ಪೀಳಿಗೆಗಳಿಗೆ ಇದು ಮುಂದುವರೆಯಬಾರದು ಎಂದರು. ಈ ಹಿಂದೆ ನಾನು ಜಿಲ್ಲೆಯ ಅಭಿವೃದ್ಧಿಗೆ ನನ್ನ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದೇನೆ. ಹೆಸರು ಹೇಳದೆ ಮಾಜಿ ಸಚಿವ ಎಂ ಬಿ ಪಾಟೀಲ ಅವರ ಬೆಂಬಲಿಗರನ್ನು ಟೀಕಿಸಿದ ಅವರು, ನನ್ನ ವಿರುದ್ಧ ಚೇಲಾಗಳ ಮೂಲಕ ಹೇಳಿಕೆ ನೀಡಿಸೋದು ತಪ್ಪು, ಬೇಕಿದ್ದರೆ ನೇರವಾಗಿಯೇ ಹೇಳಲಿ ಎಂದು ಸವಾಲು ಹಾಕಿದರು.
ಅವರು ರಾಜಕಾರಣ ಮಾಡಿದರೆ, ನಾನೂ ರಾಜಕಾರಣ ಮಾಡುವೆ. ಈ ಹಿಂದೆ ನಮ್ಮಲ್ಲಿ ಎಷ್ಟೇ ಅಸಮಾಧಾನವಿದ್ದರೂ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಸಹಕಾರ ನೀಡಿದ್ದೇವೆ. ಸಹಕಾರ ನೀಡಿದ್ದಕ್ಕೆ ಜಿಲ್ಲೆಯ ನೀರಾವರಿ ಅಭಿವೃದ್ಧಿಯಾಗಿದೆ. ನಾನು ಎಲ್ಲಾ ನೋವುಗಳನ್ನ ನುಂಗಿಗೊಂಡು ಸಿದ್ದರಾಮಯ್ಯ ಸರ್ಕಾರಕ್ಕೆ ಸಾಥ್ ನೀಡಿದ್ದೇನೆ. ನನಗೆ ಯಾವುದೇ ಹೈಕಮಾಂಡ್ ಇಲ್ಲ, ನನ್ನ ಆತ್ಮವೇ ನನಗೆ ಹೈಕಮಾಂಡ್ ಎಂದು ಹೇಳಿದರು.
ಶಾಸಕರಲ್ಲಿ ಅಸಮಾಧಾನ ಇದ್ದರೆ ಕುಮಾರಸ್ವಾಮಿ ಸರ್ಕಾರದ ಗತಿಯೇ ಸಿದ್ದರಾಮಯ್ಯ ಸರ್ಕಾರಕ್ಕೆ ಆಗುತ್ತಿತ್ತು ಎಂದರು. ನೀರಾವರಿ ಕೆಲಸವನ್ನು ನಾನೇ ಮಾಡಿದ್ದೇನೆ ಅಂತಾ ಹೇಳಿಕೊಳ್ಳುವಂತಹ ಮೂರ್ಖ ರಾಜಕಾರಣಿಗಳು ಜಿಲ್ಲೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನೂ ನನ್ನ ಬಗ್ಗೆ ಪುಸ್ತಕ ಬರೆಯುತ್ತಿರೋದಾಗಿ ಶಾಸಕರೊಬ್ಬರು ಹೇಳಿದ್ದಾರೆ. ಅದು ಸರಿಯಲ್ಲ, ಅವರು ಪುಸ್ತಕ ಬರೆದರೆ ನಾನು ಡಿಕ್ಷನರಿ ತೆಗೆಯಬೇಕಾಗುತ್ತದೆ. ಅವರು ನನ್ನ ಜತೆ ಏನು ಮಾತನಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕಾಗುತ್ತದೆ ಎಂದು ಗುಡುಗಿದರು.