ವಿಜಯಪುರ :ಮಾಜಿ ಸಿಎಂ ಯಡಿಯೂರಪ್ಪ ಪರ ಮಾತನಾಡಿದ ಸ್ವಾಮೀಜಿಗಳ ವಿರುದ್ಧ ಮಾತನಾಡುವಾಗ ಎಲ್ಲಾ ಸ್ವಾಮೀಜಿಗಳು ಎಂದು ಯತ್ನಾಳ್ ಹೇಳಿದ್ದಾರೆ. ಇದು ಮಠಾಧೀಶರಿಗೆ ಮಾಡಿದ ಅವಮಾನ. ಎಲ್ಲಾ ಸ್ವಾಮೀಜಿಗಳು ಎಂದು ಹೇಳಬಾರದು ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸಲಹೆ ನೀಡಿದರು.
ಯತ್ನಾಳ್ ವಿರುದ್ದ ಅಪ್ಪುಪಟ್ಡಣಶೆಟ್ಟಿ ಆರೋಪ ವಿಜಯಪುರದಲ್ಲಿ ಮಾತನಾಡಿದ ಅವರು, ಮಠಾಧೀಶರಿಗೆ ಅವಮಾನ ಮಾಡುವುದು ಸರಿಯಲ್ಲ. ಮಠಾಧೀಶರು ಹಣ ಪಡೆದಿದ್ದಾರೆ ಎಂದು ನಗರ ಶಾಸಕರು ಆರೋಪ ಮಾಡುವುದು ಸರಿಯಲ್ಲ. ನಗರ ಶಾಸಕರಿಗೆ ತಲೆ ಸರಿಯಿಲ್ಲ.
ಯಾವ ಸ್ವಾಮೀಜಿ ಹಣ ಪಡೆದುಕೊಂಡಿದ್ದಾರೆ? ಅವರ ಹೆಸರು ಬಹಿರಂಗ ಪಡಿಸಲಿ. ಎಲ್ಲಾ ಮಠಾಧೀಶರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಹಿಂದೂಗಳ ಭಾವನೆಗೆ ಶಾಸಕ ಯತ್ನಾಳ್ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ನಾನು ಹಿಂದೂ ನಾಯಕ ಎಂದು ಯತ್ನಾಳ್ ಬಿಂಬಿಸಿಕೊಳ್ಳುತ್ತಾರೆ. ಆದರೆ, ಸ್ವಾಮೀಜಿಗಳ ವಿರುದ್ಧ ಮಾತನಾಡುತ್ತಾರೆ. ಮಠಗಳು ನಮ್ಮ ಧಾರ್ಮಿಕ ಕೇಂದ್ರಗಳು. ಆದರೆ, ಅಂತಹ ಕೇಂದ್ರಗಳಿಗೆ ಧಕ್ಕೆ ತರುವಂಥ ಕೆಲಸ ನಗರ ಶಾಸಕರು ಮಾಡಿದ್ದಾರೆ. ಇದು ಖಂಡನೀಯ ಎಂದರು.
ಯಡಿಯೂರಪ್ಪ ಅವರ ಪರವಾಗಿ ಸ್ವಾಮೀಜಿಗಳು ನಿಂತಿದ್ದಕ್ಕೆ ಹೊಟ್ಟೆ ಕಿಚ್ಚಿನಿಂದ ಅವರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಕಷ್ಟದ ಸಮಯದಲ್ಲಿ ಮಠಾಧೀಶರು ಸಾರ್ವಜನಿಕರೊಂದಿಗೆ ನಿಲ್ಲುತ್ತಾರೆ. ಅವರ ಹೇಳಿಕೆಯಿಂದ ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಯತ್ನಾಳ್ ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಅಪ್ಪು ಪಟ್ಟಣಶೆಟ್ಟಿ ಆಗ್ರಹಿಸಿದರು.