ವಿಜಯಪುರ :ಬಿಜೆಪಿ ಮಾಡಿರುವ ಟ್ವೀಟ್ನಲ್ಲಿ ಬಳಸಿರುವ ಪದ ಬಳಕೆ ಬಿಜೆಪಿ ಅವರಿಗೆ ಅನ್ವಯ ವಾಗುತ್ತದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಸಿಂದಗಿ ಉಪಚುನಾವಣಾ ಪ್ರಚಾರಕ್ಕೆ ರಾಮಪೂರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದ ಬೆಳವಣಿಗೆಯನ್ನ ಎರಡು ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಮುಂದಿನ ವಿಧಾನಸಭೆ ಚುನಾವಣೆ ಕಾರ್ಯಾಗಾರದ ನಂತರ ಎರಡು ಪಕ್ಷಕ್ಕೆ ಆತಂಕ ಶುರುವಾಗಿದೆ ಎಂದರು.
ಬಿಜೆಪಿ ಟ್ವೀಟ್ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿರುವುದು.. ಬಿಜೆಪಿಯವರ ಮನೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ನಾನು ಕದ್ದು ಯಾವುದನ್ನು ಮಾಡಿಲ್ಲ. ನಾನು ಮಾಡಿದ ತಪ್ಪಿನ ಬಗ್ಗೆ ವಿಧಾನಸಭೆ ಕಲಾಪದಲ್ಲಿಯೇ ಚರ್ಚೆ ಮಾಡಿದ್ದೇನೆ ಎಂದು ತಿರುಗೇಟು ನೀಡಿದರು.
ಜೀವನದಲ್ಲಿ ಕೆಲ ಕೆಟ್ಟ ಘಟನೆಗಳು ನಡೆದಿವೆ, ದಾರಿ ತಪ್ಪಿದ್ದೆ, ಅದನ್ನು ಸರಿ ಮಾಡಿಕೊಂಡಿದ್ದೇನೆ. ನಮ್ಮ ಬಂಡವಾಳ ಏನಿದ್ರು ಬಿಚ್ಚಿಡಲು ಹೇಳಿ, ನನ್ನದು ತೆರೆದ ಪುಸ್ತಕ. ನಾನು ಇನ್ನೊಬ್ಬರ ರೀತಿ ಕದ್ದುಮುಚ್ಚಿ ಮಾಡಿಲ್ಲ, ನನ್ನಿಂದ ಸಮಾಜಕ್ಕೆ ಯಾವುದೇ ತಪ್ಪು ಆಗಿಲ್ಲ. ಬಿಜೆಪಿಯವರ ಒಬ್ಬೊಬ್ಬರದು ಒಂದೊಂದು ಇತಿಹಾಸ ಇದೆ, ಅದರ ಬಗ್ಗೆ ಎಚ್ಚರಿಕೆ ಇರಲಿ ಎಂದರು.
ನಾನು ಯಾರ ಜೊತೆ ರಾಜೀ ಮಾಡಿಕೊಂಡಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಹೋರಾಟ ಮಾಡುತ್ತಿದ್ದೇನೆ, ವೈಯಕ್ತಿಕ ವಿಚಾರಗಳನ್ನು ಕೆದಕೋದರಿಂದ ಯಾರಿಗೆ ಉಪಯೋಗ, ನನ್ನ ವೈಯಕ್ತಿಕ ವಿಚಾರ ಪ್ರಸ್ತಾಪದಿಂದ ನಾನು ಆತಂಕಕ್ಕೊಳಗಾಗೋದಿಲ್ಲ. ನಾಯಕರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು, ನಿಮ್ಮ ಹತ್ತರಷ್ಟು ಕೆಸರನ್ನು ನಾನು ಎರಚಬಲ್ಲೆ ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.