ಮುದ್ದೇಬಿಹಾಳ(ವಿಜಯಪುರ):ಮಹಾರಾಷ್ಟ್ರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯ ಆರ್ಭಟದ ಪರಿಣಾಮ ಡೋಣಿ ನದಿಯಲ್ಲಿ ಪ್ರವಾಹವು ಹೆಚ್ಚಳವಾಗಿದೆ. ನದಿ ದಡದ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಜಮೀನಿನಲ್ಲಿಯ ತೊಗರಿ, ಸೂರ್ಯಕಾಂತಿ, ಹತ್ತಿ, ಸಜ್ಜೆ ಅಲ್ಲದೇ ಇನ್ನಿತರ ಬೆಳೆಗಳು ನೀರುಪಾಲಾಗುವ ಆತಂಕ ರೈತಾಪಿ ವರ್ಗದವರಲ್ಲಿ ಮೂಡಿದೆ.
ಡೋಣಿ ನದಿಯಲ್ಲಿ ಪ್ರವಾಹ ಹೆಚ್ಚಳ: ತಾಳಿಕೋಟಿ-ಹಡಗಿನಾಳ ರಸ್ತೆ ಸಂಪರ್ಕ ಕಡಿತ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ: ಡೋಣಿ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಮೇಲ್ಮಟ್ಟದ ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಈ ಸೇತುವೆ ನಿರ್ಮಾಣದ ಟೆಂಡರ್ ಅವಧಿ ಮುಗಿದಿದ್ದರೂ ಗುತ್ತಿಗೆದಾರರಾಗಲಿ ಅಥವಾ ಅಧಿಕಾರಿಗಳಾಗಲಿ ಎಚ್ಚೆತ್ತುಕೊಳ್ಳುತ್ತಿಲ್ಲಾ. ಕೂಡಲೇ ಮೇಲ್ಮಟ್ಟದ ಸೇತುವೆ ಕಾಮಗಾರಿ ಮುಕ್ತಾಯಗೊಳಿಸಿ ವಾಹನ ಸಂಚಾರಕ್ಕೆ, ಜನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಜನರ ಆಗ್ರಹವಾಗಿದೆ.
ಹಡಗಿನಾಳ ಗ್ರಾಮಕ್ಕೆ ತೆರಳುವ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳಮಟ್ಟದ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಹಡಗಿನಾಳ, ಹರನಾಳ, ಶಿವಪೂರ, ನಾಗೂರ ಗ್ರಾಮಸ್ಥರಿಗೆ ಸಂಪರ್ಕ ಕಡಿತಗೊಂಡಿದೆ. ಸುಮಾರು 6 ಕೀಲೋ ಮೀಟರ್ ಅಂತರದ ಮೂಕಿಹಾಳ ಗ್ರಾಮದ ಮೂಲಕ ತಾಳಿಕೋಟಿ ಪಟ್ಟಣಕ್ಕೆ ಆಗಮಿಸಿ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಹೋಗುತ್ತಿರುವದು ಕಂಡುಬರುತ್ತಿದೆ.
ಎಸ್ಎಸ್ಎಲ್ಸಿ ದ್ವಿತೀಯ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು ಡೋಣಿ ನದಿಯಲ್ಲಿ ಕಾಣಿಸಿಕೊಂಡಿರುವ ಪ್ರವಾಹದಿಂದ ಊರು ಸುತ್ತುವರೆದು ತಡವಾಗಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇನ್ನುಳಿದಂತೆ ತಾಳಿಕೋಟಿ-ವಿಜಯಪುರ ಸಂಪರ್ಕಿಸುವ ಸೇತುವೆ ಕೆಳಗಡೆ ಇರುವ ಹನುಮಾದ ದೇವಸ್ಥಾನದ ಮೆಟ್ಟಿಲುಗಳ ಬಳಿ ನೀರು ಹರಿಯುತ್ತಿದೆ. ಇನ್ನೂ ನೀರಿನ ಹರಿವು ಹೆಚ್ಚಳಗೊಳ್ಳುವ ಸಾಧ್ಯತೆ ಇದೆ. ತಾಲೂಕಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರಕ್ಕೆ ಜಾನುವಾರು, ಜನರು ತೆರಳದಂತೆ ಎಚ್ಚರಿಕೆ ನೀಡಿ ಡಂಗೂರ ಸಾರಲಾಗಿದೆ ಎಂದು ತಹಸೀಲ್ದಾರ್ ಅನಿಲ್ ಕುಮಾರ ಢವಳಗಿ ತಿಳಿಸಿದ್ದಾರೆ.
6 ತಿಂಗಳ ಹಿಂದೆ ಇದೇ ಪ್ರವಾಹದ ಪರಿಸ್ಥಿತಿ ಎದುರಾಗಿ ತಾಲೂಕಿನ ನದಿಯ ಅಕ್ಕಪಕ್ಕದ ನೂರಾರು ಎಕರೆ ಭೂಪ್ರದೇಶದಲ್ಲಿಯ ತೊಗರೆ ಬೆಳೆ, ಹತ್ತಿ, ಸೂರ್ಯಕಾಂತಿ ಬೆಳೆಗಳು ನೀರುಪಾಲಾಗಿ ಹೋಗಿದ್ದರೆ ಇನ್ನೂ ಕೆಲವು ಜಮೀನುಗಳಲ್ಲಿ ಮಣ್ಣೂ ಸಹ ಕೊಚ್ಚುಕೊಂಡು ಹೋಗಿತ್ತು. ಜಿಲ್ಲಾಡಳಿತ ತಾಲೂಕಾಡಳಿತದ ಮೂಲಕ ವರದಿ ತರಿಸಿಕೊಂಡು ಅಲ್ಪಸ್ವಲ್ಪ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳಲಾಗಿತ್ತು. ಸಧ್ಯ ಮತ್ತೆ ಪ್ರವಾಹದ ಭೀತಿ ಎದುರಾಗಿದ್ದು ರೈತರನ್ನು ಚಿಂತೆಗೆ ದೂಡಿದೆ.