ವಿಜಯಪುರ:ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ ಮುಂದಿನ ವರ್ಷ ಏಪ್ರಿಲ್‌ನಲ್ಲಿ ವಿಮಾನ ಹಾರಾಟ ಮಾಡುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಸೂಚನೆ ನೀಡಿದರು. ವಿಜಯಪುರ ತಾಲೂಕಿನ ಬುರಣಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ನಿರ್ಮಾಣ ಹಂತದ ಎಟಿಆರ್, ರನ್ ವೇ, ಪಾರ್ಕಿಂಗ್, ಇತರೆ ಕಚೇರಿ ಸಮುಚ್ಚಯ ವೀಕ್ಷಣೆ ಮಾಡಿದರು.
ನಂತರ ವಿಮಾನ ನಿಲ್ದಾಣದ ಬ್ಲೂಪ್ರಿಂಟ್ ವೀಕ್ಷಣೆ ಮಾಡಿ ಮಾತನಾಡಿದರು. ಸದ್ಯ 300 ಕೋಟಿ ರೂ.ಗಳು ವಿಮಾನ ನಿಲ್ದಾಣ ಕಾಮಗಾರಿ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ 80 ರಿಂದ 50 ಕೋಟಿ ರೂ. ಬೇಕಾಗಿದ್ದು, ಸದ್ಯ 50 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಒಟ್ಟು ಅಂದಾಜು 400 ಕೋಟಿ ರೂ. ಹಣ ವಿಮಾನ ನಿಲ್ದಾಣ ಪೂರ್ಣಗೊಳ್ಳಲು ಅವಶ್ಯಕತೆ ಇದೆ. ಮುಂದಿನ ವರ್ಷ ಫೆಬ್ರವರಿ ಇಲ್ಲವೇ ಮಾರ್ಚ್ ಒಳಗೆ ಪೂರ್ಣ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ ಎಂದರು.
ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು ಸಹ ಏಪ್ರಿಲ್‌ನಲ್ಲಿ ವಿಮಾನ ಹಾರಾಟ ಮಾಡುವ ಗುರಿ ಹೊಂದಲಾಗಿತ್ತು. ಈಗಾಗಲೇ ರನ್‌ವೇ, ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಸೇರಿದಂತೆ ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದರ ಜತೆ ಹಗಲಿನಲ್ಲಿ ಮಾತ್ರವಲ್ಲದೇ, ರಾತ್ರಿ ಸಹ ಲ್ಯಾಂಡಿಂಗ್ ಮಾಡುವ ವ್ಯವಸ್ಥೆ ಸಹ ಕೈಗೊಳ್ಳಲಾಗುತ್ತಿದೆ. ಕಾಮಗಾರಿ ವಿಚಾರದಲ್ಲಿ ಏನಾದರೂ ಮಾರ್ಪಾಡು ಮಾಡಲು ಹೆಚ್ಚುವರಿ ಕಾಮಗಾರಿ ಮಾಡುವ ಕುರಿತು ಮಾಹಿತಿ ಪಡೆದಿದ್ದೇನೆ. ಅಗ್ನಿಶಾಮಕ ಠಾಣೆ, ವಿವಿಧ ಉಪಕರಣಗಳ ಅವಶ್ಯಕತೆ ಇದೆ. ಅದನ್ನು ಸಹ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಹಿಂದೆ ಮಾರ್ಗ್ ಎಂಬ ಕಂಪನಿ ನಿರ್ಮಾಣ ಕಾಮಗಾರಿ ಪಡೆದು ನಂತರ ಹಿಂದೆ ಸರಿದಿತ್ತು. ಬಳಿಕ ಏರಪೋರ್ಟ್ ಅಥಾರಟಿ ಆಫ್ ಇಂಡಿಯಾ ಕಾಮಗಾರಿಗೆ ಒಲವು ತೋರಿಸಿತ್ತು. ಅದು ಸಹ ಹಿಂದೆ ಸರಿದ ಮೇಲೆ ಈಗ ಲೋಕೋಪಯೋಗಿ ಇಲಾಖೆ ಮುತುವರ್ಜಿ ವಹಿಸಿ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಕೆಲವು ಆರೋಪಗಳು ಇವರ ಮೇಲೆ ಕೇಳಿ ಬಂದಿವೆ. ಅದನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.