ವಿಜಯಪುರ:ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ಐವರನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ ₹75 ಸಾವಿರ ಮೌಲ್ಯದ 3 ಕಂಟ್ರಿ ಪಿಸ್ತೂಲ್ ಹಾಗೂ 10 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಆಲಮೇಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಆಲಮೇಲ ಪಟ್ಟಣದ ಬಂದೇನವಾಜ್ ಲಾಲಸಾಬ್ ಸೌದಾಗರ, ಸಲೀಂ ಮಹಿಬೂಬಸಾಬ್ ತಾಂಬೋಳಿ, ಕಕ್ಕಳಮೇಲಿಯ ಮಡಿವಾಳಪ್ಪ ಅಮೀನಪ್ಪ ಡೆಂಗಿ, ಅಶೋಕ ಮಹಾದೇವಪ್ಪ ಪೂಜಾರಿ, ಮಲಿಕಜಾನ್ ನಬಿಸಾಬ್ ದೇವರಮನಿ ಬಂಧಿತರು.
ಇದನ್ನೂ ಓದಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ನಾಲ್ವರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಆರೋಪಿಗಳು ಕಂಟ್ರಿ ಪಿಸ್ತೂಲ್ ಇಟ್ಟುಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ಆಲಮೇಲ ಪಟ್ಟಣದ ಇಂಡಿ ರಸ್ತೆಯ ಐಬಿ ಹತ್ತಿರ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಡಿಎಸ್‌ಬಿ ಸಿಪಿಐ ಸುನೀಲ ಕಾಂಬಳೆ, ಪಿಎಸ್‌ಐ ಬಿ.ಎಂ.ಪವಾರ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದೆ.
ಮತ್ತೊಂದು ಪ್ರಕರಣ:ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿರುವ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು, ಆತನಿಂದ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬಂಧಿತನನ್ನು ಹಂಚಿನಾಳ ತಾಂಡಾದ ಕುಮಾರ ಬಿಲ್ಲು ಜಾಧವ ಎಂದು ಗುರುತಿಸಲಾಗಿದೆ. ಈತ ಮನೆಯಲ್ಲಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.