ಕರೋನಾ ನಾಲ್ಕನೇ ಅಲೆಯ ಮೊದಲ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ವಿಜಯಪುರ: ಮಹಾಮಾರಿ ಕೊರೊನಾ ವೈರಸ್ ನಾಲ್ಕನೇ ಅಲೆ ಆರಂಭಗೊಂಡಿದ್ದು, ವಿಜಯಪುರ ನಗರದ 45 ವರ್ಷದ ವ್ಯಕ್ತಿಯೊಬ್ಬರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಇದು ನಾಲ್ಕನೇ ಅಲೆಯ ಮೊದಲ ಪ್ರಕರಣವಾಗಿ ದಾಖಲಾಗಿದೆ.
ಈ ಕುರಿತು ಜಿಲ್ಲಾಸ್ಪತ್ರೆ ಸರ್ಜನ್ ಡಾ. ಸಂಗಣ್ಣ ಲಕ್ಕಣ್ಣವರ ಮಾಹಿತಿ ನೀಡಿದ್ದು, ವ್ಯಕ್ತಿಯೊಬ್ಬರಿಗೆ ಜ್ವರ, ಕೆಮ್ನು, ನೆಗಡಿಯಿಂದ ವ್ಯಕ್ತಿಯನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಪಾಸಿಟಿವ್ ಬಂದಿರುವ ವ್ಯಕ್ತಿಯ ಸಂಪರ್ಕದಲ್ಲಿರುವ ಅವರ ಕುಟುಂಬದವರನ್ನು ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ ಯಾವುದೇ ಪಾಸಿಟಿವ್ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಪಾಸಿಟಿವ್ ಬಂದಿರುವ ವ್ಯಕ್ತಿಗೆ ಜಿಲ್ಲಾಸ್ಪತ್ರೆಯಲ್ಲಿರುವ ಕೊವಿಡ್ ರೂಮ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಎಲ್ಐ ಕೇಸ್ ಇದಾಗಿದೆ. ಕಳೆದ ಒಂದು ತಿಂಗಳ ನಂತರ ಮೊದಲು ಪಾಸಿಟಿವ್ ಪ್ರಕರಣ ಗುರುತಿಸಲಾಗಿದೆ. ಹೀಗಾಗಿ ನಾಲ್ಕನೇ ಅಲೆಯ ಪ್ರಕರಣ ಎಂದು ಗುರುತಿಸಬಹುದು. ಸ್ಥಳೀಯ ವ್ಯಕ್ತಿಯಾದ್ದರಿಂದ ಪ್ರಯಾಣ ಇತಿಹಾಸ ಇಲ್ಲ. ಹೀಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರು ಸರ್ಕಾರದ ನಿಯಮಾವಳಿ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಸರ್ಕಾರ ರೂಪಿಸಿರುವ ಕೋವಿಡ್ ಮಾರ್ಗಸೂಚಿ ಪಾಲಿಸಿ ವೈರಾಣು ಹರಡದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ಕೋವಿಡ್ ಬಿಎಫ್-7 ಉಪತಳಿ ನಿಯಂತ್ರಣಕ್ಕೆ ಸರ್ಕಾರ ಸರ್ವ ಸನ್ನದ್ದ: ಸಚಿವ ಸುಧಾಕರ್