ವಿಜಯಪುರ: ಜುವೆಲ್ಸರ್ ಶಾಪ್ನಲ್ಲಿ ಚಿನ್ನ ಕದಿಯಲು ಬಂದಿದ್ದ ದುರ್ಷ್ಕಮಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರನ್ನು ಹೆದರಿಸಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಘಟನೆ ಸಿಂದಗಿ ಪಟ್ಟಣದ ಶಾಂತವೀರ ಮಠದ ಬೀದಿ ಪಕ್ಕದಲ್ಲಿ ಇರುವ ನ್ಯೂ ಚಾಮುಂಡೇಶ್ವರಿ ಜ್ಯುವೆಲರ್ಸ್ ಮಾಲೀಕ ಕಾಳು ಪತ್ತಾರ ಎಂಬುವವರಿಗೆ ಸೇರಿದ್ದಾಗಿದೆ. ಈ ಜುವೆಲರ್ಸ್ಗೆ ಸಂಜೆ ನುಗ್ಗಿದ ದುಷ್ಕರ್ಮಿಗಳು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ಪಲ್ಸರ್ ಮೇಲೆ ಬಂದ ಐವರ ಖದೀಮರಲ್ಲಿ ಓರ್ವ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳಿ ಬಂದ ಕೂಡಲೇ ಸ್ಥಳೀಯರು ಸುತ್ತ ಸೇರಿಕೊಂಡಿದ್ದಾರೆ. ಈ ವೇಳೆ ನಂಬರ್ ಇಲ್ಲದ ಪಲ್ಸರ್ ಬೈಕ್ನಲ್ಲಿ ಕಿರಾತಕರು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಅಲ್ಲಿದ್ದ ಜನ ಇಬ್ಬರನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಲ್ಸರ್ ಬೈಕ್ ಸದ್ಯ ಪೊಲೀಸರ ವಶದಲ್ಲಿದೆ. ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.