ವಿಜಯಪುರ:2014ರ ಮೇ 26 ರಂದು ವಿಜಯಪುರದ ಗಾಂಧಿ ಚೌಕ್ ಬಳಿಯ ಹಣ್ಣಿನ ಮಾರುಕಟ್ಟೆ ಬಳಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಎಲ್ಲ 134 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ.
ಇಂದು ವಿಡಿಯೋ ಸಂವಾದ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಸವೇಶ್ವರ ದೇವಸ್ಥಾನದಿಂದ ಗಾಂಧಿ ಚೌಕ್ ವರೆಗೆ ವಿಜಯೋತ್ಸವ ಆಚರಿಸಲಾಗುತ್ತಿತ್ತು.
ಈ ವೇಳೆ ಗಾಂಧಿ ಚೌಕ್ ಬಳಿಯ ಮಾರುಕಟ್ಟೆಯಲ್ಲಿ ಗಲಭೆ ನಡೆದಿತ್ತು. ಈ ಗಲಾಟೆ ಕೋಮು ಗಲಭೆಯಾಗಿ ತಿರುವು ಪಡೆದಿತ್ತು. ಎರಡು ಕೋಮುಗಳ ಮಧ್ಯೆ ಕಲ್ಲು ತೂರಾಟ ನಡೆದು, ಬೈಕ್ ಹಾಗೂ ಇತರೆ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣ ನಡೆದು ಸುಮಾರು 7 ವರ್ಷಗಳ ನಂತರ ಎಲ್ಲ ಆರೋಪಿಗಳು ಖುಲಾಸೆಯಾಗಿದ್ದಾರೆ. ಇದು ನ್ಯಾಯಕ್ಕೆ ಸಂದ ಜಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂತಸ ವ್ಯಕ್ತಪಡಿಸಿದ್ದಾರೆ.