ವಿಜಯಪುರ: ಪಿಎಸ್ಐ ನೇಮಕಾತಿ ಹಗರಣ ಇನ್ನೂ ತನಿಖಾ ಹಂತದಲ್ಲಿ ಇರುವಾಗಲೇ, ಕೆಪಿಎಸ್ಸಿ ಕರೆದಿದ್ದ ಎಫ್ಡಿಎ ಪ್ರಥಮ ದರ್ಜೆ ಸಹಾಯಕ ಹುದ್ದೆ ಕೊಡಿಸುವುದಾಗಿ ಮಹಿಳಾ ಪಿಎಸ್ಐ ಒಬ್ಬರು ಅವರ ಸಂಬಂಧಿಕ ಯುವಕನಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಸದ್ಯ ಮೈಸೂರಿನ ಎನ್. ಆರ್. ಪೊಲೀಸ್ ಠಾಣೆಯ ಸಂಚಾರಿ ವಿಭಾಗದ ಪಿಎಸ್ಐ, ಎಫ್ಡಿಎ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಯುವಕ ಸಂಗಮೇಶ ಝಳಕಿ ಎಂಬುವವರು ಆರೋಪಿಸಿದ್ದಾರೆ. ಈ ಯುವಕ ಪಿಎಸ್ಐ ಸಂಬಂಧಿಕ ಎನ್ನಲಾಗುತ್ತಿದೆ.
ಅಷ್ಟಕ್ಕೂ ಏನಿದರ ಹಿನ್ನೆಲೆ:2020 ಮಾರ್ಚ್ನಲ್ಲಿ ಎಫ್ಡಿಎ ಹುದ್ದೆಗಾಗಿ ಕೆಪಿಎಸ್ಸಿ ಅರ್ಜಿ ಆಹ್ವಾನಿಸಲಾಗಿತ್ತು. ಇದೇ ಪಿಎಸ್ಐ ತಮ್ಮ ಸಂಬಂಧಿಕ ಸಂಗಮೇಶ ಅವರಿಗೆ ಅರ್ಜಿ ಹಾಕಲು ಹೇಳಿದ್ದರು. ತಮಗೆ ಪರಿಚಯಸ್ಥರಿಂದ ಹುದ್ದೆ ಕೊಡಿಸುವೆ ಮೊದಲು 2 ಲಕ್ಷ ರೂ. ಹೊಂದಾಣಿಕೆ ಮಾಡಲು ಹೇಳಿದ್ದರು.
ನಂತರ ಹುದ್ದೆ ದೊರೆತ ಮೇಲೆ 15 ಲಕ್ಷದವರೆಗೆ ಹಣ ನೀಡಬೇಕು ಎಂದರು. ನಿರುದ್ಯೋಗಿಯಾಗಿದ್ದ ಸಂಗಮೇಶ ನೌಕರಿ ಸಿಗುವ ಆಸೆಯಿಂದ ಮೊದಲು 1.80ಲಕ್ಷ ರೂ.ಗಳನ್ನು ಪಿಎಸ್ಐ ಖಾತೆಗೆ ಜಮಾ ಮಾಡಿದ್ದಂತೆ. ನಂತರ ಹಣದ ಅವಶ್ಯಕತೆ ಇದೆ ಎಂದು ಹೇಳಿ ಮತ್ತೆ 30 ಸಾವಿರ ತೆಗೆದುಕೊಂಡಿದ್ದರು ಎಂದು ಸಂಗಮೇಶ್ ದೂರಿದ್ದಾನೆ.