ವಿಜಯಪುರ: ಜಿಲ್ಲೆಯ ಕಲಕೇರಿ ಗ್ರಾಮದಲ್ಲಿ ನಡೆದ ಪ್ರೇಮಿಗಳ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯ ತಂದೆ ಹಾಗೂ ಆಕೆಯ ಸಹೋದರ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಯುವತಿಯ ತಂದೆ ಬಂದಗಿಸಾಬ್ ತಂಬದ್ (50), ಸಹೋದರ ದಾವಲ್ಪಟೇಲ್ (20), ಅಳಿಯರಾದ ಅಲ್ಲಾಪಟೇಲ್ (29) ರಫೀಕ್ (24) ಅವರನ್ನು ಬಂಧಿಸಲಾಗಿದ್ದು, ಇನ್ನೋರ್ವನಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಏನಿದು ಪ್ರಕರಣ
ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಯುವತಿಯ ತಂದೆಯೇ ಸ್ವಂತ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಗಡಿ ಗ್ರಾಮ ಸಲಾದಹಳ್ಳಿಯಲ್ಲಿ ನಡೆದಿತ್ತು. ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದ ಯುವಕ ಬಸವರಾಜ ಬಡಿಗೇರ (20 ವರ್ಷ) ಹಾಗೂ ಪಕ್ಕದ ಗ್ರಾಮ ಖಾನಾಪುರದ ಯುವತಿ ದಾವಲಬಿ ಬಂದಗಿಸಾಬ್ ತಂಬದ (19 ವರ್ಷ) ಕೊಲೆಯಾಗಿತ್ತು.
ಯುವತಿ ದಾವಲಬಿ ತನ್ನ ಪ್ರಿಯಕರ ಬಸವರಾಜ ಬಡಿಗೇರ ಭೇಟಿಯಾಗಿದ್ದ ವೇಳೆ, ಇಬ್ಬರನ್ನೂ ಒಟ್ಟಿಗೆ ಕಂಡ ಯುವತಿಯ ಕುಟುಂಬಸ್ಥರು ಇಬ್ಬರನ್ನೂ ಕೊಲೆ ಮಾಡಿ ಪರಾರಿಯಾಗಿದ್ದರು. ಯುವತಿಯ ತಂದೆ ಹಾಗೂ ಆತನ ಅಳಿಯಂದಿರು ಕಲ್ಲು ಹಾಗೂ ಚಾಕು ಬಳಸಿ ಇಬ್ಬರನ್ನೂ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಕಲಕೇರಿ ಠಾಣೆ ಪೊಲೀಸರು ಯುವತಿಯ ತಂದೆ ಹಾಗೂ ಆತನ ಸಂಬಂಧಿಗಳ ಬಂಧನಕ್ಕೆ ಬಲೆ ಬೀಸಿದ್ದರು.
ಇದನ್ನೂ ಓದಿ:ವಿಜಯಪುರ ಪ್ರೇಮಿಗಳ ಹತ್ಯೆ ಪ್ರಕರಣ... ತಂದೆಯೇ ವಿಲನ್!!