ವಿಜಯಪುರ: ಜಿಲ್ಲೆಯಲ್ಲಿ ಒಂದು ವಾರದಿಂದ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಬಿತ್ತನೆ ಕೈಗೆತ್ತಿಕೊಂಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೊರತೆ ಉಂಟಾಗಿದ್ದು, ಗೊಬ್ಬರ ಅಂಗಡಿ ಮಾರಾಟಗಾರರು ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈಗಾಗಲೇ ಈ ಸಂಬಂಧ 12 ಅಂಗಡಿಗಳ ಪರವಾನಿಗೆ ಕೂಡ ರದ್ದು ಮಾಡಲಾಗಿದೆ.
ಕಾಳಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟ ಆರೋಪ: ಜಂಟಿ ಕೃಷಿ ನಿರ್ದೇಶಕರ ಸ್ಪಷ್ಟನೆ ಇದರಿಂದ ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸಹ ದಾಖಲಿಸಲಾಗಿದೆ. ಆದರೆ, ಗೊಬ್ಬರ ಮಾತ್ರ ಸಂಗ್ರಹವಿಲ್ಲ ಎನ್ನುತ್ತಿದ್ದಾರೆ ಕೃಷಿ ಇಲಾಖೆ ಅಧಿಕಾರಿಗಳು.
ಉತ್ತಮ ಇಳುವರಿಗೆ ಗೊಬ್ಬರದ ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ ಈ ಮುಂಗಾರಿಗೆ 4.89 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಯಲ್ಲಿ 3.60 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೇವಲ ತೊಗರಿ ಬೆಳೆ ಬೆಳೆಯಲಾಗಿದೆ. ಜೊತೆಗೆ ಜೋಳ, ಗೋಧಿ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗಿದೆ.
ಉತ್ತಮ ಮಳೆಯಿಂದ ಭೂಮಿ ಹಸಿಯಾಗಿದ್ದು, ಯೂರಿಯಾ ಗೊಬ್ಬರ ಹಾಕಿದರೇ ಉತ್ತಮ ಫಸಲು ಬರುತ್ತೆ ಅನ್ನೋದು ರೈತರ ನಿರೀಕ್ಷೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಗೊಬ್ಬರ ಅಂಗಡಿ ಮಾಲೀಕರು ಯೂರಿಯಾ ಗೊಬ್ಬರ ಚೀಲಕ್ಕೆ ನಿಗದಿತ ಬೆಲೆಗಿಂತ ಹೆಚ್ಚಿನ ಹಣಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಉತ್ತಮ ಮಳೆಯಿಂದ ಗೊಬ್ಬರಕ್ಕೆ ಬೇಡಿಕೆ: ಉತ್ತಮ ಮಳೆ ಹಿನ್ನೆಲೆ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ರೈತರು ಕೇವಲ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇಡುತ್ತಿದ್ದಾರೆ. ಬೇರೆ ಗೊಬ್ಬರ ಸಹ ಹಾಕಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಹೇಳಿದರು.
ಪ್ರತಿ ವರ್ಷದ ಅಂದಾಜಿನಂತೆ ಕೃಷಿ ಇಲಾಖೆ ಗೊಬ್ಬರವನ್ನು ಅಂಗಡಿಕಾರರಿಗೆ ವಿತರಿಸಿದೆ. ಬೇಡಿಕೆ ಹೆಚ್ಚಾದ ಕಾರಣ ಈ ಸಮಸ್ಯೆ ಉಂಟಾಗಿದೆ ಹೊರತು ಅಂಗಡಿಕಾರರು ಯಾವುದೇ ಕಾಳಸಂತೆಯಲ್ಲಿ ಮಾರಾಟ ಮಾಡಿಲ್ಲ ಎಂದರು.
ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ 15 ಸಾವಿರ ಹಾಗೂ ಆಗಸ್ಟ್ವರೆಗೆ 4,500 ಟನ್ ಯೂರಿಯಾ ಗೊಬ್ಬರದ ಬೇಡಿಕೆ ಇತ್ತು. ಕೃಷಿ ಇಲಾಖೆ ಸಹ ಇಲ್ಲಿಯವರೆಗೆ 20 ಸಾವಿರ ಟನ್ ಗೊಬ್ಬರ ಸರಬರಾಜು ಮಾಡಿದೆ. ಆದರೂ ಗೊಬ್ಬರದ ಕೊರತೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಕೃಷಿ ಪರಿಕರ ಮಾರಾಟ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೋರಿ ಆರೋಪಿಸಿದರು.