ವಿಜಯಪುರ :ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಜಾರಿಗೆ ತರಲು ಹೊರಟಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಕಾರ್ಯಕರ್ತರು ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಎಪಿಎಂಸಿ ಕಾಯ್ದೆ ತಿದ್ದುಪಡೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆಗಳು ರೈತ ವಿರೋಧಿಯಾಗಿವೆ. ಕಾಯ್ದೆಗಳು ತಿದ್ದುಪಡಿಯಾಗುವುರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ ಎಂದರು.
ಸರ್ಕಾರ ರೈತರ ಭೂಮಿ ಖರೀದಿಗೆ ಮುಕ್ತ ಅವಕಾಶ ಕಲ್ಪಿಸಿದೆ. ರೈತರ ಭೂಮಿಗಳು ಕಾರ್ಪೊರೇಟ್ ಸಂಸ್ಥೆಗಳ ಪಾಲಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ಕೊರೊನಾ ವೈರಸ್ ಭೀತಿ ಸಮಯಲ್ಲಿ ರೈತರ ಪರ ನಿಲ್ಲಬೇಕಿದ್ದ ಸರ್ಕಾರಗಳು ಇಂದು ಅವರ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿವೆ. ಅಲ್ಲದೆ ಎಪಿಎಂಸಿ ಕಾಯ್ದೆ ತಿದ್ದುಪಡೆಯಿಂದ ಅನೇಕ ಕೂಲಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವಂತಾಗಿದೆ ಎಂದು ಕಿಡಿಕಾರಿದರು.
ಜಾರಿಗೆ ತರಲು ಹೊರಟಿರುವ ಎಲ್ಲಾ ಕಾಯ್ದೆಗಳನ್ನು ತಿದ್ದುಪಡಿಯಿಂದ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.