ವಿಜಯಪುರ: ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಜೂನ್ 27 ರಂದು ರಾಜ್ಯಾದ್ಯಂತ ಗ್ರಾಮ ಪಂಚಾಯತ್ಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಟನೆ ಮುಖಂಡ ಭೀಮಶಿ ಕಲಾದಗಿ ತಿಳಿಸಿದರು.
ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆಗೆ ಮುಂದಾದ ಅನ್ನದಾತರು - ವಿಜಯಪುರದಲ್ಲಿ ರೈತ ಮುಖಂಡರ ಸುದ್ದಿಗೋಷ್ಟಿ
ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಜೂನ್ 27 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರದಲ್ಲಿ ರೈತ ಮುಖಂಡರು ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆಗಳ ಜಾರಿಗೆ ಮುಂದಾಗುತ್ತಿದೆ. ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳು ರೈತ ವಿರೋಧಿಯಾಗಿವೆ. ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಲು ಹೊರಟಿದ್ದಾರೆ. ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತ ಸಂಘರ್ಷ ಸಮನ್ವಯ ಸಮಿತಿಯಿಂದ ಹೋರಾಟ ನಡೆಸಲಾಗುವುದು ಎಂದರು.
ರೈತ ಮುಖಂಡ ಭಾಗವನ್ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ರೈತರ ಪರವಾದ ಯೋಜನೆ ಬಿಟ್ಟು, ರೈತ ವಿರೋಧಿ ಕಾಯ್ದೆ ತರಲು ಹೊರಟಿದೆ. ಕಾರ್ಪೊರೇಟ್ ಕೃಷಿಯನ್ನು ಹಿಮ್ಮೆಟ್ಟಿಸಿ, ರೈತಾಪಿ ಕೃಷಿಯನ್ನು ರಕ್ಷಿಸಿ ಎಂಬ ಘೋಷವಾಕ್ಯದಲ್ಲಿ ಜೂನ್ 27 ರಂದು ಎಲ್ಲಾ ರೈತ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.