ಮುದ್ದೇಬಿಹಾಳ: ಮುದ್ದೇಬಿಹಾಳಕ್ಕೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮಂಜೂರಾಗಿದ್ದರೂ ಅದರ ಸ್ಥಳಾಂತರಕ್ಕೆ ವಿಜಯಪುರದ ವಿಜ್ಞಾನಿಗಳೇ ಅಡ್ಡಿಯಾಗಿದ್ದಾರೆ ಎಂದು ಕೃಷಿಕ ಸಮಾಜದ ಜಿಲ್ಲಾ ಮುಖಂಡ ವೆಂಕನಗೌಡ ಪಾಟೀಲ ಆರೋಪಿಸಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಗುರುವಾರ ವಿವಿಧ ರೈತಪರ ಸಂಘಟನೆಗಳ ಮುಖಂಡರೊಂದಿಗೆ ಕೃಷಿ ಕೇಂದ್ರದ ಸ್ಥಳಾಂತರ ಕುರಿತು ಶಾಸಕರ ಎದುರಿಗೆ ಮಾತನಾಡಿದ ಅವರು, ಅಲ್ಲಿನ ಪ್ರೊಫೆಸರ್ ಒಬ್ಬರು ಎರಡು ಕಡೆ ಇನ್‌ಚಾರ್ಜ ಇದ್ದಾರೆ. ವರ್ಷಕ್ಕೆ 72 ಲಕ್ಷ ರೂ.ಅನುದಾನ ಕೃಷಿ ವಿಶ್ವವಿದ್ಯಾಲಯಕ್ಕೆ ಬರುತ್ತದೆ. ಅಲ್ಲಿನ ಕೆಲ ಪ್ರೊಫೆಸರ್ ತಮ್ಮದೇ ರೈತರ ಗುಂಪು ಕಟ್ಟಿಕೊಂಡು ಬೇರೆ ಬೇರೆ ಕಡೆಗಳಿಂದ ಮನವಿ ಕೊಡಿಸುತ್ತಾರೆ ಎಂದು ಆರೋಪಿಸಿದರು. ಅಲ್ಲಿನ ವಿಜ್ಞಾನಿಗಳು ಮುದ್ದೇಬಿಹಾಳಕ್ಕೆ ಈ ಕೇಂದ್ರ ಸ್ಥಳಾಂತರಗೊಳ್ಳಲು ಅಡ್ಡಗಾಲು ಹಾಕಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಶಾಸಕರು ಈ ಕೇಂದ್ರ ಸ್ಥಳಾಂತರದಿಂದ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದರು.