ಮುದ್ದೇಬಿಹಾಳ(ವಿಜಯಪುರ): ಕೋವಿಡ್ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ಲಾಕ್‌ಡೌನ್ ನಷ್ಟ ಅನುಭವಿಸುತ್ತಿರುವ ನೇಕಾರರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ತಾಲೂಕಿನ ನಾಲತವಾಡದ ಕೈಮಗ್ಗ ನೇಕಾರರು ಒತ್ತಾಯಿಸಿದ್ದಾರೆ.
ಸಂಕಷ್ಟದಲ್ಲಿರುವ ನೇಕಾರರ ಕುಟುಂಬ ಈಟಿವಿ ಭಾರತದೊಂದಿಗೆ ಮಾತನಾಡಿರುವ ನಾಲತವಾಡ ಪಟ್ಟಣದ ಕೈಮಗ್ಗ ನೇಕಾರರು, ನಾಲತವಾಡದಲ್ಲೇ 200ಕ್ಕೂ ಹೆಚ್ಚು ನೇಕಾರ ಕುಟುಂಬಗಳಿವೆ. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ನೇಕಾರ ದಾಸಿಮಯ್ಯ ಬಂಟನೂರ, ಗೋದಾವರಿ ರುದ್ರಗಂಟಿ ಮಾತನಾಡಿ, ನೇಕಾರಿಕೆಯನ್ನೇ ಮೂಲ ಉದ್ಯೋಗವನ್ನಾಗಿಸಿಕೊಂಡು ಉಪ ಜೀವನ ಮಾಡುತ್ತಿರುವ ಬಡ ನೇಕಾರ ಕುಟುಂಬಗಳು ಲಾಕ್ಡೌನ್ನಿಂದ ಬಹಳ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ದೈನಂದಿನ ಜೀವನ ಮಾಡುವುದು ಕಠಿಣವಾಗಿದೆ.
ಕಳೆದ ವರ್ಷ ಭಾರೀ ಮಳೆಯಿಂದಾಗಿ ಹಲವರ ಮನೆಗಳಿಗೆ ಹಾನಿಯಾಗಿದ್ದು ಬಿದ್ದಿರುವ ಮನೆಗಳಲ್ಲಿ ಉದ್ಯೋಗ ಮುಂದುವರೆಸಿದ್ದರು. ಆದರೀಗ ಕೊರೊನಾ ಅದನ್ನೂ ಕಸಿದುಕೊಂಡಿದೆ ಎಂದು ಹೇಳಿದರು. ಇನ್ನೇನು ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಮತ್ತೆ ಲಾಕ್‌ಡೌನ್ ಮಾಡಿರುವುದರಿಂದ ಗಾಯಕ್ಕೆ ಬರೆ ಹಚ್ಚಿದಂತಾಗಿದೆ. ಆದ್ದರಿಂದ ಕೂಡಲೇ ಸರ್ಕಾರ ನೇಕಾರರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.