ವಿಜಯಪುರ: ಮಗನಿಗೆ ಬಂದ ಅಪರೂಪದ ಖಾಯಿಲೆ ಇಲ್ಲೊಂದು ಕುಟುಂಬವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಪ್ರತಿ ತಿಂಗಳೂ ಮಗನ ರಕ್ತ ಬದಲಿಸಬೇಕು. ಇಲ್ಲವಾದರೆ ನರಕಯಾತನೆಯನ್ನು ಪೋಷಕರೇ ಕಣ್ಣಾರೆ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕೆ ಪೋಷಕರು ದಾನಿಗಳಲ್ಲಿ ಸಹಾಯಕ್ಕೆ ಮನವಿ ಮಾಡಿದ್ದಾರೆ.
ಬಸವನ ಬಾಗೇವಾಡಿ ಪಟ್ಟಣದ ನಿವಾಸಿ ಈರಣ್ಣ ನಾಗೂರ ಹಾಗೂ ಸವಿತಾ ನಾಗೂರ ದಂಪತಿ ತಮ್ಮ ಮಗನಿಗೆ ಬಂದ ಖಾಯಿಲೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈರಣ್ಣ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಸವಿತಾ ಕೂಲಿ ಕೆಲಸ ಮಾಡುತ್ತಾ ಸಂಸಾರದ ಬಂಡಿ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ, ಹಾಳು ಮಾಡಬೇಡಿ: ಹೆಚ್.ಡಿ.ಕುಮಾರಸ್ವಾಮಿ
ಈ ಕುಟುಂಬಕ್ಕೆ ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಮಗ ಕಾರ್ತಿಕ ಮೂರು ವರ್ಷದಿಂದ ಥಲಸ್ಸೇಮಿಯಾ ರೋಗದಿಂದ ಬಳಲುತ್ತಿದ್ದಾನೆ. ಈ ರೋಗದಿಂದಾಗಿ ಮಗುವಿನ ಮುಖ, ಕಣ್ಣುಗಳು, ಬಾಯಿಗೆ ತೊಂದರೆಯಾಗುತ್ತಿದೆಯಂತೆ. ಪ್ರತಿ ತಿಂಗಳು ರಕ್ತ ಬದಲಿಸಬೇಕು. ಈಗಾಗಲೇ 32 ಬಾರಿ ರಕ್ತ ಬದಲಿಸಿದ್ದೇವೆ. ಇಲ್ಲಿಯವರೆಗೆ 2 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಈಗ ಪ್ರತಿಬಾರಿ ರಕ್ತ ಬದಲಾಯಿಸಲು ಹಣ ಬೇಕು. ಆರ್ಥಿಕ ಸಮಸ್ಯೆಯಿಂದಾಗಿ ಚಿಕಿತ್ಸೆ ಕೊಡಿಸಲು ಕಷ್ಟವಾಗುತ್ತಿದೆ. ಮಣಿಪಾಲ, ಬೆಳಗಾವಿ, ಬೆಂಗಳೂರು ಆಸ್ಪತ್ರೆಗೆ ಅಲೆದಾಡಿ ಬಂದಿದ್ದು, ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಪೋಷಕರು.
ಬೋನ್ ಮ್ಯಾರೋ ಆಪರೇಷನ್ ಮಾಡಿಸಲು 10 ಲಕ್ಷ ರೂ ಖರ್ಚಾಗುತ್ತದೆ. ಇದನ್ನು ನಮಗೆ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಮಗನ ಪ್ರಾಣ ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು ದಂಪತಿ ದಾನಿಗಳಲ್ಲಿ ಮನವಿ ಮಾಡಿದ್ದಾರೆ.