ವಿಜಯಪುರ:ಜಿಲ್ಲೆಯ ಮಹತ್ವದ ನೀರಾವರಿ ಯೋಜನೆಯಾಗಿರುವ ಮುಳವಾಡ ಏತ ನೀರಾವರಿ ಯೋಜನೆ 3ನೇ ಹಂತದ ಹನಮಾಪುರ ಜಾಕ್ವೆಲ್ ಹಾಗೂ ಮಸೂತಿ ಜಾಕ್ವೆಲ್ ಮುಖ್ಯ ಕಾಲುವೆಯ ಪಕ್ಕದ ದಂಡೆಯ ಮಣ್ಣು ಕುಸಿಯುತ್ತಿದ್ದು, ರೈತರು, ಗ್ರಾಮಸ್ಥರ ಆತಂಕದಲ್ಲಿದ್ದಾರೆ.
ಸೇತುವೆಯ ಮಣ್ಣು ಕುಸಿದಿರುವುದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ಕನಸಿನ ಕೂಸಾಗಿರುವ ಮುಳವಾಡ ಏತ ನೀರಾವರಿ 3ನೇ ಹಂತದ ಯೋಜನೆಯಿಂದ ಈ ಭಾಗದ ಲಕ್ಷಾಂತರ ಎಕರೆ ಭೂಮಿ ನೀರಾವರಿಗೆ ಒಳಪಟ್ಟಿದೆ. ಈ ಯೋಜನೆಯಿಂದ ಮಸೂತಿ ಹಾಗೂ ಹನಮಾಪುರ ಜಾಕ್ವೆಲ್ಗೆ ನೀರು ಹರಿಸಲಾಗುತ್ತಿದೆ. ಆದ್ರೆ ಕಾಲುವೆ ಪಕ್ಕದ ಮಣ್ಣು ನಿರಂತರವಾಗಿ ಕುಸಿಯುತ್ತಿದ್ದು, ರೈತರು ಹಾಗೂ ಗ್ರಾಮಸ್ಥರಿಗೆ ಆತಂಕ ಕಾಡುತ್ತಿದೆ.
ಮಸೂತಿ ಹಾಗೂ ಸುತ್ತಲಿನ ಹಳ್ಳಿಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ KBJNL ಮಸೂತಿ ಮುಖ್ಯ ಕಾಲುವೆಗೆ ನಿರ್ಮಿಸಿರುವ ಆಯಕಟ್ಟಿನ ರಸ್ತೆ ಕಾಮಗಾರಿ ಮುಗಿದು ವರ್ಷ ಕಳೆಯುವುದರಲ್ಲೇ ಕಾಮಗಾರಿ ಗುಣಮಟ್ಟದ ನಿಜರೂಪ ಬಯಲಾಗಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯ ದಂಡೆಯಲ್ಲಿ ಸುಮಾರು ಐದಾರು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು, ರಸ್ತೆಗೆ ಹಾಕಿರುವ ಡಾಂಬರ್ ಕಿತ್ತು ಹೋಗಿದೆ. ಅಪಾಯದ ರಸ್ತೆಯಲ್ಲೇ ಪ್ರತಿದಿನ ರೈತರು ಹಾಗು ಗ್ರಾಮಸ್ಥರ ಹೊತ್ತ ಟಂಟಂ, ಟ್ರ್ಯಾಕ್ಟರ್ ಸೇರಿದಂತೆ ಬೃಹತ್ ವಾಹನಗಳು ಇಲ್ಲಿ ಸಂಚರಿಸುತ್ತಿವೆ. ಇಲ್ಲಿ ಸಂಚರಿಸುವ ರೈತರು, ಗ್ರಾಮಸ್ಥರು ಹಾಗು ಶಾಲಾ ಮಕ್ಕಳು ಜೀವ ಭಯದಲ್ಲೇ ಓಡಾಡುವ ದುಸ್ಥಿತಿ ಎದುರಾಗಿದೆ.
ಸುರಕ್ಷತಾ ಕ್ರಮವಾಗಿ ಈ ಐದು ಕಿ.ಮೀ. ಉದ್ದದ ಕಾಲುವೆಯ ಆಯಕಟ್ಟಿನ ರಸ್ತೆಗೆ ಸುರಕ್ಷತಾ ಕ್ರಮವಾಗಿ ಎಲ್ಲಿಯೂ ತಡೆಗೋಡೆ ನಿರ್ಮಿಸಿಲ್ಲ. ತಕ್ಷಣ ತಡೆಗೋಡೆ ನಿರ್ಮಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ. ಅಲ್ಲದೇ ಯಾವುದಾದರೂ ಅನಾಹುತ ಸಂಭವಿಸುವ ಮುನ್ನ KBJNL ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಗಾರಿ ಕೈಗೊಳ್ಳಬೇಕಿದೆ.