ಕರ್ನಾಟಕ

karnataka

ETV Bharat / state

ಮುಂಗಾರು ವಿಳಂಬ: ವಿಜಯಪುರದ ಆಲಮಟ್ಟಿ ಜಲಾಶಯದಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ

ಮಳೆ ಅಭಾವದಿಂದ ವಿಜಯಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆಯಲ್ಲಿ (ಆಲಮಟ್ಟಿ ಜಲಾಶಯ) ದಿನ ದಿನಕ್ಕೆ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ.

falling-water-level-in-alamatty-reservoir-in-vijayapura
ಮುಂಗಾರು ವಿಳಂಬ: ಆಲಮಟ್ಟಿ ಜಲಾಶಯದಲ್ಲಿ ಕುಸಿಯುತ್ತಿರುವ ನೀರಿನ ಮಟ್ಟ

By

Published : Jun 27, 2023, 7:56 PM IST

Updated : Jun 27, 2023, 10:53 PM IST

ವಿಜಯಪುರದ ಆಲಮಟ್ಟಿ ಜಲಾಶಯದಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ

ವಿಜಯಪುರ: ಈ ಬಾರಿ ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿದೆ. ಹೀಗಾಗಿ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ನದಿಗೆ ಒಳಹರಿವು ಕಡಿಮೆಯಾಗಿದೆ. ಕೃಷ್ಣಾ ನದಿ ಉಗಮ ಸ್ಥಾನದ ಮಹಾರಾಷ್ಟ್ರದ ಮಹಾಬಲೇಶ್ವರ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗದೇ ಇರುವುದರಿಂದ ನದಿಗೆ ಒಳಹರಿವು ಇಳಿಕೆಯಾಗಿದೆ.

ಕೃಷ್ಣಾ ಭಾಗ್ಯ ನಿಗಮದ ಅಭಿಯಂತ ಹೆಚ್. ಸುರೇಶ್​ ಮಾತನಾಡಿ, "519.60 ಮೀಟರ್ ಸಾಮರ್ಥ್ಯ ಹೊಂದಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆಯಲ್ಲಿ ಸದ್ಯ 507.50 ಮೀಟರ್​ಗೆ ನೀರಿನ ಮಟ್ಟ ತಲುಪಿದೆ. 123 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ ಬಳಕೆಗೆ ಲಭ್ಯವಿರುವುದು 2.025 ಟಿಎಂಸಿ ಮಾತ್ರ. ಇನ್ನುಳಿದ ನೀರು ಡೆಡ್ ಸ್ಟೋರೇಜ್ ರೂಪದಲ್ಲಿರುತ್ತದೆ. ಇದರ ಮಧ್ಯೆ ಡ್ಯಾಂಗೆ ಒಳ ಹರಿವು ಕಡಿಮೆಯಿದ್ದು, ಪ್ರತಿ ದಿನ 590 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ" ಎಂದರು.

ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್​ಗೆ 75 ಕ್ಯೂಸೆಕ್ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ 515 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಿದೆ. ರಾಜ್ಯ ಹಾಗೂ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಮುಂಗಾರು ಚುರುಕುಗೊಳ್ಳದೇ ಇದ್ದರೆ ವಿಜಯಪುರ ನಗರ ಸೇರಿದಂತೆ ಇತರೆ ಭಾಗಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:Tomato: ಕೆಜಿಗೆ 20 ರೂಪಾಯಿಯಿಂದ ₹100ಕ್ಕೆ ಜಿಗಿದ ಟೊಮೆಟೊ ಬೆಲೆ! ಕಾರಣವೇನು ಗೊತ್ತೇ?

ಸಿಗಂದೂರು ಸೇತುವೆ ಕಾಮಗಾರಿಗೆ ಅಡ್ಡಿ:ಮತ್ತೊಂದೆಡೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಸಿಗಂದೂರು ಬಳಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಗೆ ನೀರು ಕಡಿಮೆಯಾಗಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಸುಮಾರು 2.14 ಕಿ.ಮೀ. ಉದ್ದ ಹಾಗೂ 16 ಮೀಟರ್​ ಅಗಲದ 423.15 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಯಿತು. ಕೊರೊನಾ ಹಾಗೂ ಹೆಚ್ಚಿನ ಪ್ರಮಾಣದ ಹಿನ್ನೀರಿನ ಕಾರಣ ಆರಂಭದ ಎರಡು ವರ್ಷ ನಿಧಾನವಾಗಿ ಸಾಗಿದ ಕಾಮಗಾರಿ ಕೆಲಸ ನಂತರ ವೇಗ ಪಡೆಯಿತು. ಪ್ರಸ್ತುತ ಆಳವಾದ ಹಿನ್ನೀರಿನಲ್ಲಿ 17 ಪಿಲ್ಲರ್​ಗಳನ್ನು ನಿರ್ಮಿಸಲಾಗಿದ್ದು, ಪಿಲ್ಲರ್​ಗಳ ನಡುವೆ ಪ್ರೀಕಾಸ್ಟ್​ ಕಾಂಕ್ರೀಟ್​ ಬ್ಲಾಕ್​ಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ.

ಆದರೆ ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತಗೊಳ್ಳುತ್ತಿರುವ ಕಾರಣ ಕಳೆದೊಂದು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ. 1819 ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 1740 ಅಡಿ ನೀರಿದ್ದು ಸುಮಾರು 80 ಅಡಿಯಷ್ಟು ನೀರು ಕಡಿಮೆಯಾಗಿದೆ. ಬ್ರಿಡ್ಜ್​ ನಿರ್ಮಾಣದ ಕೆಲಸ ಹಿನ್ನೀರಿನಲ್ಲೇ ನಡೆಯಬೇಕಿರುವ ಕಾರಣ ಭಾರಿ ಗಾತ್ರದ ಲಾಂಚ್​ಗಳ ಓಡಾಟಕ್ಕೆ ಅಡಚಣೆಯುಂಟಾಗಿದೆ. ಈಗಿರುವ ನೀರಿನ ಮಟ್ಟದಲ್ಲಿ ಕ್ರೇನ್​ಗಳ ಮೂಲಕ 40 ರಿಂದ 50 ಅಡಿ ಎತ್ತರದ ಪಿಲ್ಲರ್ ಬಳಿ ಕಾಂಕ್ರೀಟ್​ ಬ್ಲಾಕ್​ಗಳನ್ನು ಎತ್ತಿ ಇಡಲು ಸಾಧ್ಯವಾಗುತ್ತಿಲ್ಲ. ಡ್ಯಾಂನ ನೀರಿನ ಮಟ್ಟ ಏರಿದರೆ ಮಾತ್ರ ಕೆಲಸ ಮಾಡಲು ಸಾಧ್ಯ. ಇಲ್ಲದಿದ್ದರೆ 2024ರ ನವೆಂಬರ್​ನೊಳಗೆ ಕೆಲಸ ಪೂರ್ಣಗೊಳ್ಳುವುದು ಅಸಾಧ್ಯವಾಗಲಿದೆ.

Last Updated : Jun 27, 2023, 10:53 PM IST

ABOUT THE AUTHOR

...view details