ವಿಜಯಪುರ:ಅಂಗವಿಕಲತೆ ಪ್ರಮಾಣ ಪತ್ರ ಮತ್ತು ವಿಕಲಚೇತನರ 27 ನಕಲಿ ಸಹಿಯುಳ್ಳ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಕಲಚೇತನರ ಹಕ್ಕುಗಳ ಅಧಿನಿಯಮ-2016 ಉಪನಿಯಮ (72) ರ ಅಡಿ ರಚಿಸಲಾದ ಜಿಲ್ಲಾಮಟ್ಟದ ಸಮಿತಿ ಸಭೆ ಹಾಗೂ ವಿಕಲಚೇತನರ ಯುಡಿಐಡಿ ವಿತರಣೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಾದ್ಯಂತ ಜಿಲ್ಲಾ ಶಸ್ತ್ರಚಿಕಿತ್ಸಕರು, ವಿಶೇಷ ವೈದ್ಯಕೀಯ ತಜ್ಞರು ಹಾಗೂ ವಿಕಲಚೇತನರ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳ ನಕಲಿ ಸಹಿಯುಳ್ಳ 27 ಗುರುತಿನ ಚೀಟಿಗಳು ಪತ್ತೆಯಾಗಿವೆ. ಈ ಕುರಿತಂತೆ ಸಮಗ್ರ ಪರಿಶೀಲನೆ ನಡೆಸುವ ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈಗ ಪತ್ತೆಯಾಗಿರುವ ಗುರುತಿನ ಚೀಟಿಗಳಿಗೆ ಸಂಬಂಧಪಟ್ಟಂತೆ ಆಯಾ ತಜ್ಞ ವೈದ್ಯರು ಹಾಗೂ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಬೇಕು. ಅದರಂತೆ ಮುಂದಿನ ದಿನಗಳಲ್ಲಿ ಈ ರೀತಿಯ ಆಡಳಿತ ವೈದ್ಯಾಧಿಕಾರಿಗಳ ಮತ್ತು ಅಂಗವಿಕಲ ಕಲ್ಯಾಣ ಅಧಿಕಾರಿಗಳ, ತಜ್ಞ ವೈದ್ಯರ ನಕಲಿ ಸಹಿ ಒಳಗೊಂಡ ದಾಖಲೆ ಪತ್ತೆಯಾದಲ್ಲಿ ಆಯಾ ತಜ್ಞ ವೈದ್ಯರನ್ನೇ ಹಾಗೂ ದುರ್ಬಳಕೆ ಮಾಡಿಕೊಂಡಿರುವ ಫಲಾನುಭವಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲೆಗೂ ಕ್ರಮ ಕೈಗೊಳ್ಳಲಾಗುವುದು. ವಿಕಲಚೇತನರ ಕಲ್ಯಾಣಧಿಕಾರಿಗಳು ಸಹ ನೇರ ಹೊಣೆಗಾರರಾಗಲಿದ್ದು ಪಾರದರ್ಶಕ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.