ಮುದ್ದೇಬಿಹಾಳ(ವಿಜಯಪುರ): ಗ್ರಾಮ ಪಂಚಾಯಿತಿ ಚುನಾವಣೆ ಪ್ರಯುಕ್ತ ತಾಲೂಕಿನ ತಂಗಡಗಿ, ಮುದ್ದೇಬಿಹಾಳ ಭಾಗದಲ್ಲಿ ಅಬಕಾರಿ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿದ್ದು, ಯಾವುದೇ ಅಕ್ರಮದ ವಸ್ತುಗಳು ಸಿಗದೆ ಬರಿಗೈಯ್ಯಲ್ಲಿ ವಾಪಸಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಬಕಾರಿ ಇಲಾಖೆಯ ನಿರೀಕ್ಷಕ ಎಸ್.ಎಸ್.ಹಂದ್ರಾಳ, ಡಾಬಾಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ತಹಶೀಲ್ದಾರ್‌ರಿಗೆ ದೂರು ಬಂದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಮುದ್ದೇಬಿಹಾಳ ಪಟ್ಟಣದ ವಿವಿಧೆಡೆ ಇರುವ ಡಾಬಾಗಳು ಹಾಗೂ ತಂಗಡಗಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿರುವ ಸಂತೃಪ್ತಿ ಡಾಬಾ, ಐಪಿಎಲ್ ಡಾಬಾ ಮತ್ತು ಅಮೃತಾ ಫ್ಯಾಮಿಲಿ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದು, ಇಲ್ಲಿ ಯಾವುದೇ ರೀತಿಯ ಅಬಕಾರಿ ಅಕ್ರಮಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಪಂ ಚುನಾವಣೆಯ ಈ ಹೊತ್ತಿನಲ್ಲಿ ಡಾಬಾಗಳಲ್ಲಿ ಹಬ್ಬದ ವಾತಾವರಣವೇ ಇದ್ದರೂ ತೆರೆದಿರುವ ದಾಬಾಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ. ಡಾಬಾಗಳೆಂದಾಗ ಅಲ್ಲಿ ಮದ್ಯದ ಘಾಟು ಇರುತ್ತದೆ. ಇಂತಹ ಸನ್ನಿವೇಶದಲ್ಲಂತೂ ಮತ್ತಷ್ಟು ವಾಮಮಾರ್ಗದ ಮೂಲಕ ಅಕ್ರಮ ಮದ್ಯದ ಮಾರಾಟ ಜೋರಾಗಿರುತ್ತದೆ.