ವಿಜಯಪುರ:ಸಂಸದ ತೇಜಸ್ವಿ ಸೂರ್ಯ ಅವರು ನೆರೆ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಸಂತ್ರಸ್ತರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಅನುದಾನ ಬೇಕಿಲ್ಲ ಎಂದು ಹೇಳಿರುವ ಸಂಸದ ತೇಜಸ್ವಿ ಕನ್ನಡಿಗರಿಗೆ ಅಗೌರವ ತೋರಿದ್ದಾರೆ. ಅವರು ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳದಿದ್ದರೆ ಅವರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.
ವಿಜಯಪುರದಲ್ಲಿ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಪ್ರತಿಕ್ರಿಯೆ ಕರ್ನಾಟಕದ ಬಗ್ಗೆ ಸಂಸದ ತೇಜಸ್ವಿಯವರಿಗೆ ಎಷ್ಟರಮಟ್ಟಿಗೆ ಕಾಳಜಿ ಇದೆ ಎಂಬುದು ಅವರ ಹೇಳಿಕೆಯಿಂದ ಗೊತ್ತಾಗುತ್ತದೆ. ಬೆಳಗಾವಿಯಲ್ಲಿ ಕುಳಿತು ಹೀಗೆ ಹೇಳಿದ್ದಾರೆ ಅಂದರೆ, ಇನ್ನು ಪ್ರಧಾನಿ ನರೇಂದ್ರ ಮೋದಿ ಎದುರು ಏನು ಹೇಳಿರಬೇಕು ಎಂದು ಊಹಿಸಿ ಎಂದು ಹೇಳಿದರು.
ಪ್ರಧಾನಿ ಮೋದಿಯವರು ರಾಜ್ಯಕ್ಕೆ ಭೇಟಿ ಕೊಡದೆ ಇರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ಕಾರಣ, ಅವರು ದಾರಿ ತಪ್ಪಿಸಿದ ಕಾರಣ ಪ್ರಧಾನಿ ರಾಜ್ಯಕ್ಕೆ ಬರುತ್ತಿಲ್ಲ ಎಂದು ಹೆಚ್. ಕೆ. ಪಾಟೀಲ್ ಆರೋಪಿಸಿದರು.