ಯಾದಗಿರಿ:ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದವರನ್ನು ಎನ್ಕೌಂಟರ್ ಮಾಡಿಸಿ ಎಂದು ಹೇಳಿದ್ದೇನೆ. ಬರೀ ಅವರ ಧಮ್ ಇವರು ಧಮ್ ನೋಡುವುದಲ್ಲ. ಪೊಲೀಸರಿಗೆ ಸ್ವಾತಂತ್ರ್ಯ ನೀಡಿ ನಮ್ಮ ಧಮ್ ತೋರಿಸಬೇಕು. ಒಂದಕ್ಕೆ ನಾಲ್ಕು ಹೊಡೆದು ಧಮ್ ತೋರಿಸಬೇಕು. ಒಂದು ವೇಳೆ ಈ ಮಾತನ್ನು ತಿಳಿದುಕೊಳ್ಳದಿದ್ದರೆ ಮುಂದೆ ನಮ್ಮ ಧಮ್ ತೋರಿಸುತ್ತೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಿನ್ನೆ ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಧಮ್ ಬಗ್ಗೆ ಕೇಳಬೇಡಿ, ಧಮ್ ಇದ್ದರೆ ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡಿದವರನ್ನು ಎನ್ಕೌಂಟರ್ ಮಾಡಿ, ಧಮ್ ಗೊತ್ತಾಗುತ್ತದೆ. ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಕಾರ್ಯಕರ್ತರಿಗೆ ಸರಿಯಾಗಿ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದರೂ ಸಿಎಂ, ಗೃಹ ಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ ಎಂದರು.
ಹಿಂದು ಪರ ಮಾತನಾಡಿದವರಿಗೆ ವೋಟ್ ಹಾಕಬೇಕೆ ವಿನಃ ಅನ್ಯ ಧರ್ಮದ ಪರ ಮಾತನಾಡುವವರಿಗೆ ಅಲ್ಲ. ವಿಜಯಪುರದಲ್ಲಿ 2.5 ಲಕ್ಷ ಮತಗಳಲ್ಲಿ 1 ಲಕ್ಷ ಜನರು ಅವರಿದ್ದಾರೆ ಎಂದು ಹೇಳುವ ಮೂಲಕ ಅನ್ಯ ಧರ್ಮಿಯರ ಮತಗಳು ತಮಗೆ ಬೇಡ ಎಂದು ಪರೋಕ್ಷವಾಗಿ ಹೇಳಿದರು. ದೇಶದಲ್ಲಿ ಇನ್ನೂ 20 ವರ್ಷ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿರುತ್ತಾರೆ. ದೇಶದಲ್ಲಿ ಓವೈಸಿ ಯಾವ ಮಕ್ಕಳದು ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.