ಮುದ್ದೇಬಿಹಾಳ:ಲಾಕ್‌ಡೌನ್ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ವಲಸೆ ಕೂಲಿಕಾರ್ಮಿಕರಿಗೆ ಕೆಲಸ ಕೊಡುವ ಮೂಲಕ ಕವಡಿಮಟ್ಟಿ ಗ್ರಾ.ಪಂ ಮಾದರಿಯಾಗಿದೆ. ಕಳೆದ ಲಾಕ್‌ಡೌನ್ ಜಾರಿಯಾದಾಗಿನಿಂದ ಅಂದಾಜು 250ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕವಡಿಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಾ ಉಪಜೀವನ ಸಾಗಿಸುತ್ತಿದ್ದಾರೆ.
ವಲಸಿಗರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ ಕಳೆದ ವರ್ಷವೂ ಲಾಕ್‌ಡೌನ್‌ದಿಂದ ಉದ್ಯೋಗವಿಲ್ಲದೇ ಊರಿನೊಳಗಿದ್ದ ನಮಗೆ ಕೆಲಸ ಮಾಡಲು ಪಂಚಾಯಿತಿ ಅವಕಾಶ ಒದಗಿಸಿತ್ತು ಎಂದು ಕೂಲಿಕಾರ್ಮಿಕರು ಹೇಳುತ್ತಾರೆ. ಹೊಲಗಾಲುವೆಗಳಲ್ಲಿ ತುಂಬಿರುವ ಹೂಳೆತ್ತುವುದು, ಬಾಂದಾರ ನಿರ್ಮಾಣ, ಇಂಗು ಗುಂಡಿಗಳ ನಿರ್ಮಾಣ, ಕೆರೆಗಳ ಹೂಳೆತ್ತುವ ಕೆಲಸ ಸೇರಿದಂತೆ ಪರಿಸರದ ಉಳಿವಿನ ಜೊತೆಗೆ ಉದ್ಯೋಗ ಖಾತ್ರಿ ಯೋಜನೆ ಸಹಕಾರಿಯಾಗಿದೆ.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಎಸ್.ಕಸನಕ್ಕಿ ಮಾತನಾಡಿ, ಬೆಂಗಳೂರಿಗೆ ಕೆಲಸ ಅರಸಿ ಹೋಗಿದ್ದ ಕೂಲಿಕಾರ್ಮಿಕರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಮರಳಿದ್ದು, ಅವರಿಗೆ ಇಲ್ಲಿ ಕೆಲಸ ನೀಡಲಾಗಿದೆ. ಮೂರನೇ ಕಾಲುವೆ ಹೂಳು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಪುರುಷ ಮಹಿಳೆ ಬೇಧವಿಲ್ಲದೇ ಪಂಚಾಯಿತಿಗೆ ಕೆಲಸ ಬೇಕು ಎಂದು ಹೆಸರು ನೋಂದಾಯಿಸಿದವರಿಗೆ ಕೆಲಸ ಕೊಡುವ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಕೂಲಿಕಾರ್ಮಿಕರಾದ ಸಂಗನಗೌಡ ಪಾಟೀಲ, ನಾಜುಕಬಿ ನದಾಫ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ನಮಗೆ ಕೆಲಸ ಕೊಟ್ಟಿದ್ದಾರೆ. ನಾವು ಮನೆಯಲ್ಲಿ ಖಾಲಿ ಕೂಡದೇ ದುಡಿದು ಜೀವನ ಸಾಗಿಸಲು ಅನುಕೂಲವಾಗಿದೆ ಎಂದರು.
ರೈತ ಅಶೋಕ ನಾಡಗೌಡ ಮಾತನಾಡಿ, ಕಾಲುವೆಯಲ್ಲಿನ ಹೂಳೆತ್ತಲು ಕೆಬಿಜೆಎನ್‌ಎಲ್‌ದವರಿಗೆ ಮೊದಲು ರೈತರು ಮನವಿ ಮಾಡಿದ್ದೆವು. ಆದರೆ ಅವರು ಹೂಳೆತ್ತದೇ ನಿರ್ಲಕ್ಷ್ಯವಹಿಸಿದರು. ಬಳಿಕ ಗ್ರಾಮ ಪಂಚಾಯಿತಿಯವರು ಈ ಕೆಲಸ ಮಾಡಿಸುತ್ತಿದ್ದಾರೆ. ಎಲ್ಲ ರೈತರಿಗೆ ಇದರಿಂದ ಅನುಕೂಲವಾಗಲಿದ್ದು ಪಂಚಾಯಿತಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿದರು.