ವಿಜಯಪುರ:ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ತಗ್ಗಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಗಣನೀಯವಾಗಿ ಇಳಿಮುಖವಾಗಿರುವ ಕಾರಣ ಹೊರಹರಿವು ಸಹ ಕಡಿಮೆ ಮಾಡಲಾಗಿದೆ. ಈ ಪರಿಣಾಮ 6 ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಜುಲೈ ಮೊದಲು ವಾರದಲ್ಲಿ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಹೊರಹರಿವು ಸಹ ಜಾಸ್ತಿ ಮಾಡಲಾಗಿತ್ತು. ಹೀಗಾಗಿ ಜುಲೈ 8 ರಿಂದ ವಿದ್ಯುತ್ ಉತ್ಪಾದನಾ ಘಟಕದಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿತ್ತು.
ಜು.8ರಿಂದ 26ರವರೆಗೆ ಒಟ್ಟು ಆರು ಘಟಕಗಳಿಂದ 90 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಸದ್ಯ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿರುವ ಕಾರಣ ಹೊರ ಹರಿವು ಸಹ ಕಡಿಮೆ ಮಾಡಲಾಗಿದೆ. ಈ ಕಾರಣದಿಂದ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಒಳಹರಿವು ಹೆಚ್ಚಾದರೆ ಮತ್ತೆ ವಿದ್ಯುತ್ ಉತ್ಪಾದನೆ ಆರಂಭ ಗೊಳ್ಳಲಿದೆ.
ಜಲಾಶಯದ 6 ಘಟಕಗಳಿಂದ ವಿದ್ಯುತ್ ಉತ್ಪಾದಿಸಲು ನಿತ್ಯ 45 ಸಾವಿರ ಕ್ಯೂಸೆಕ್ ನೀರಿನ ಹೊರ ಹರಿವು ಬೇಕಾಗುತ್ತದೆ. ಎಲ್ಲಾ ಘಟಕ ಆರಂಭವಾದರೆ ನಿತ್ಯ 6 ದಶಲಕ್ಷ ಯುನಿಟ್ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿನ ಸಾಮರ್ಥ್ಯ:
ಗರಿಷ್ಠ 519.60 ಮೀಟರ್ ಎತ್ತರದ ಜಲಾಶಯದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯವರೆಗೆ 517.34 ಮೀಟರ್ ಎತ್ತರದವರೆಗೆ ನೀರು ಸಂಗ್ರಹ ಮಾಡಲಾಗಿದೆ. 123.081 ಟಿಎಂಸಿ ಸಾಮರ್ಥ್ಯ ದ ಜಲಾಶಯದಲ್ಲಿ ಸದ್ಯ 88.758 ಟಿಎಂಸಿ ನೀರು ಸಂಗ್ರಹವಿದೆ. ಸದ್ಯ 12,257 ಕ್ಯೂಸೆಕ್ ಒಳಹರಿವು ಇದ್ದು, ಕೇವಲ 1922 ಕ್ಯೂಸೆಕ್ ನೀರು ಸದ್ಯ ಹೊರ ಹರಿವು ಇದೆ.
ಕಳೆದ ವರ್ಷ ಇದೇ ದಿನ 519.20 ಮೀಟರ್ ನೀರು ಜಲಾಶಯದಲ್ಲಿತ್ತು. ಕಳೆದ ವರ್ಷ (2019) ಜಲಾಶಯದಲ್ಲಿ ಈ ವೇಳೆ 116.196 ಟಿಎಂಸಿ ನೀರು ಸಂಗ್ರಹವಿತ್ತು. 102752 ಕ್ಯೂಸೆಕ್ ಒಳಹರಿವು ಹಾಗೂ 117336 ಕ್ಯೂಸೆಕ್ ಹೊರ ಹರಿವು ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿದೆ.