ವಿಜಯಪುರ: ಕೋವಿಡ್ 19 ಮಹಾಮಾರಿಯಿಂದ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಶಾಲೆಗಳು ಕ್ರಮೇಣ ಹಂತ ಹಂತವಾಗಿ ಆರಂಭಗೊಂಡಿವೆ. ಸದ್ಯ 1ರಿಂದ 5ನೇ ತರಗತಿ ಹೊರತು ಪಡಿಸಿ, ಪ್ರಾಥಮಿಕ, ಪ್ರೌಢಶಾಲೆಗಳ ತರಗತಿ ಆರಂಭಗೊಂಡಿವೆ. ಆದರೆ, ಕೊರೊನಾ ರೋಗದ ಅತಿಯಾದ ನಿಯಮಾವಳಿ ಶಾಲೆಯಲ್ಲಿ ವಿದ್ಯಾರ್ಥಿ ಹಾಜರಾತಿ ಕಡಿಮೆಯಾಗಲು ಕಾರಣವಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಬದಲು ಅಕ್ಕಿ, ಗೋಧಿ ಸೇರಿ ಅಗತ್ಯ ಆಹಾರ ಪದಾರ್ಥ ವಿತರಿಸಲಾಗುತ್ತಿದ್ದರೂ ಹಾಜರಾತಿ ಹೆಚ್ಚಳವಾಗುತ್ತಿಲ್ಲ. ಇನ್ನು ಕೆಲ ಸೂತ್ರಗಳನ್ನು ಹಾಜರಾತಿಗಾಗಿ ಶಿಕ್ಷಣ ಇಲಾಖೆ ಕೊನೆ ಅಸ್ತ್ರವನ್ನು ಹೂಡಲು ಮುಂದಾಗಿದೆ.
ಶಿಕ್ಷಣ ಇಲಾಖೆಯಿಂದ ನೂತನ ಕ್ರಮ ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕುಂಟಿತವಾಗಬಾರದು ಎಂದು ಶಿಕ್ಷಣ ಇಲಾಖೆ ಆನ್ ಲೈನ್ ಶಿಕ್ಷಣ, ವಿದ್ಯಾಗಮನ ಪದ್ದತಿ ಅನುಸರಿಸಿತ್ತು. ಆದರೆ, ಈ ವ್ಯವಸ್ಥೆ ಕೇವಲ ಶ್ರೀಮಂತ ಮಕ್ಕಳನ್ನು ಮಾತ್ರ ತಲುಪಲು ಸಾಧ್ಯವಾಯಿತು. ಪ್ರಾಥಮಿಕ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಬೇಕಾಯಿತು. ಈ ಶಾಲೆ ಎಂದಿನಂತೆ ಆರಂಭಗೊಂಡಿದೆ. ವಿದ್ಯಾರ್ಥಿಗಳನ್ನು ಮತ್ತೆ ಶಾಲೆಯತ್ತ ಸೆಳೆಯಬೇಕಾಗಿದೆ. ಇದಕ್ಕಾಗಿ ಶಿಕ್ಷಕರು, ಮುಖ್ಯಗುರುಗಳು ನಿತ್ಯ ಶಾಲೆಯಿಂದ ದೂರ ಉಳಿದ ಮಕ್ಕಳ ಮನೆಗೆ ತೆರಳಿ ಅವರಿಗೆ ಮಧ್ಯಾಹ್ನದ ಬಿಸಿಯೂಟದ ಆಹಾರಧಾನ್ಯ ನೀಡುವ ಆಮಿಷವೊಡ್ಡಿ ಅವರ ಪೋಷಕರನ್ನು ಸೆಳೆಯುತ್ತಿದ್ದು, ಈ ಮೂಲಕ ಮಕ್ಕಳನ್ನು ಶಾಲೆಗೆ ಕರೆ ತಂದು ಹಾಜರಾತಿ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಅನುದಾನಿತ, ಅನುದಾನ ರಹಿತ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಂಖ್ಯೆ 2,776 ಹಾಗೂ 559 ಪ್ರೌಢಶಾಲೆಗಳಿವೆ. ಸದ್ಯ ಪ್ರಾಥಮಿಕ ಶಾಲೆಯಲ್ಲಿ ಶೇ. 70ರಷ್ಟು ಹಾಜರಾತಿ ಇದೆ. ಪ್ರೌಢಶಾಲೆಯಲ್ಲಿ ಶೇ. 80ರಷ್ಟು ಮಕ್ಕಳ ಹಾಜರಾತಿ ಇದೆ. ಸದ್ಯ ಸರ್ಕಾರ 6ರಿಂದ 10ರವರೆಗೆ ಶಾಲೆ ಆರಂಭಿಸಲು ಅನುಮತಿ ನೀಡಿದೆ. 1ರಿಂದ 5ನೇ ತರಗತಿಯ ಮಕ್ಕಳಿಗೆ ಶಾಲೆ ಬದಲು ನಿತ್ಯ ಹೋಮ್ ವರ್ಕ್ ನೀಡಲಾಗುತ್ತಿದೆ. ಈ ಮೂಲಕ ಅವರನ್ನು ಶಾಲೆಯತ್ತ ಈಗಲೇ ಆಕರ್ಷಿಸುವ ಕೆಲಸ ಶಿಕ್ಷಣ ಇಲಾಖೆ ಮಾಡುತ್ತಿದೆ.
ರಾಜ್ಯ ಸರ್ಕಾರ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಆರಂಭಿಸಲು ಅನುಮತಿ ನೀಡಿದ್ದಾಗ ಕೋವಿಡ್ ನಿಯಮಾವಳಿ ಕಡ್ಡಾಯವಾಗಿ ಪಾಲಿಸಬೇಕು. ಶಾಲೆಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿತ್ತು. ಆದರೆ ಯಾವ ಶಾಲೆಗಳಲ್ಲಿ ಇದನ್ನು ಎಳ್ಳಷ್ಟು ಪಾಲಿಸುತ್ತಿಲ್ಲ. ಮಾಸ್ಕ್ನ್ನು ವಿದ್ಯಾರ್ಥಿಗಳು ಮರತೇ ಹೋಗಿದ್ದಾರೆ.